ADVERTISEMENT

5000 ಹಾಸಿಗೆಗಳ ಸೌಲಭ್ಯ ಕಲ್ಪಿಸಿ: ರೈಲ್ವೆ ಮಂಡಳಿಗೆ ದೆಹಲಿ ಸರ್ಕಾರ ಮನವಿ

ಪಿಟಿಐ
Published 18 ಏಪ್ರಿಲ್ 2021, 12:01 IST
Last Updated 18 ಏಪ್ರಿಲ್ 2021, 12:01 IST
ಕೋವಿಡ್ ಆರೈಕೆಗಾಗಿ ಪರಿವರ್ತಿಸಲಾದ ರೈಲ್ವೆ ಕೋಚ್‌ (ಸಂಗ್ರಹ ಚಿತ್ರ)
ಕೋವಿಡ್ ಆರೈಕೆಗಾಗಿ ಪರಿವರ್ತಿಸಲಾದ ರೈಲ್ವೆ ಕೋಚ್‌ (ಸಂಗ್ರಹ ಚಿತ್ರ)   

ನವದೆಹಲಿ: ಕೋವಿಡ್‌ ಆರೈಕೆಗೆ ಪೂರಕವಾಗಿ ಪರಿವರ್ತಿಸಲಾದ ಕೋಚ್‌ಗಳನ್ನು ಶಕುರ್‌ ಬಸ್ತಿ ಮತ್ತು ಆನಂದ್ ವಿಹಾರ್‌ ನಿಲ್ದಾಣಗಳಲ್ಲಿ ನಿಯೋಜಿಸುವ ಮೂಲಕ 5,000 ಹಾಸಿಗೆಗಳ ಸೌಲಭ್ಯವನ್ನು ಕೋವಿಡ್‌ ಪೀಡಿತರ ಚಿಕಿತ್ಸೆಗೆ ಒದಗಿಸಬೇಕು ಎಂದು ದೆಹಲಿ ಸರ್ಕಾರ ರೈಲ್ವೆ ಇಲಾಖೆಗೆ ಮ‌ನವಿ ಮಾಡಿದೆ.

ಈ ಕುರಿತು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್‌ ಶರ್ಮಾ ಅವರಿಗೆ ಪತ್ರ ಬರೆದಿರುವ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ದೇವ್ ಅವರು,ದೆಹಲಿಯಲ್ಲಿ ಸೋಂಕು ತೀವ್ರಗತಿಯಲ್ಲಿ ಏರುತ್ತಿದೆ. ಗಂಭೀರ ಸ್ಥಿತಿಯಲ್ಲಿ ಇರುವವರ ಸಂಖ್ಯೆಯೂ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದೆ. ಹಾಸಿಗೆಗಳ ಲಭ್ಯತೆ ಕಡಿಮೆ ಇದೆ ಎಂದು ತಿಳಿಸಿದ್ದಾರೆ.

ಸದ್ಯ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ ಕುಗ್ಗುತ್ತಿದೆ. ಹೆಚ್ಚಿನ ಹಾಸಿಕೆಗಳ ಸೌಲಭ್ಯ‌ದ ತುರ್ತು ಅಗತ್ಯವಿದೆ. ಹೀಗಾಗಿ, ಕೋವಿಡ್‌ ಹಾಸಿಗೆ ಸೌಲಭ್ಯಗಳನ್ನು ಕೋಚ್‌ಗಳನ್ನು ನಿಯೋಜಿಸುವ ಮೂಲಕ ಒದಗಿಸಬೇಕು. ಇದನ್ನು ತುರ್ತಾಗಿ ಪರಿಗಣಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಕಳೆದ ವರ್ಷ ಒದಗಿಸಿದ್ದಂತೆ 5000 ಹಾಸಿಗೆ ಸಾಮರ್ಥ್ಯದ ಸೌಲಭ್ಯ ಸಿಗುವಂತೆ ರೈಲ್ವೆ ಇಲಾಖೆ ಕ್ರಮವಹಿಸಿದರೆ ಅನುಕೂಲ ಎಂದು ತಿಳಿಸಿದ್ದಾರೆ. ಕಳೆದ ವರ್ಷ ದೆಹಲಿ (503), ಉತ್ತರ ಪ್ರದೇಶ (270) ಮತ್ತು ಬಿಹಾರಕ್ಕೆ (40) ಒಟ್ಟು 813 ಕೋಚ್‌ಗಳನ್ನು ರೈಲ್ವೆ ಇಲಾಖೆ ಒದಗಿಸಿತ್ತು. ಆದರೆ, ಇವುಗಳಲ್ಲಿ ಹೆಚ್ಚಿನವು ಬಳಕೆ ಆಗಿರಲಿಲ್ಲ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರ ಪ್ರಕಾರ, ದೆಹಲಿಯಲ್ಲಿ ನಿತ್ಯ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ 25 ಸಾವಿರ ಮೀರಿದ್ದು, ಕಳೆದ 24 ಗಂಟೆಗಳಲ್ಲಿ ಸೋಂಕು ಏರಿಕೆ ಪ್ರಮಾಣವು ಶೇ 24ರಿಂದ 30ಕ್ಕೆ ಏರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.