
ನವದೆಹಲಿ (ಪಿಟಿಐ): ವಿಮಾನ ಸಿಬ್ಬಂದಿಯ ಕರ್ತವ್ಯ ಅವಧಿಯ ಮಿತಿ (ಎಫ್‌ಡಿಟಿಎಲ್) ನಿಯಮಾವಳಿ ಜಾರಿ ಕುರಿತು ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ದೆಹಲಿ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
‘ಸಿಬ್ಬಂದಿಯ ಆಯಾಸವನ್ನು ಪರಿಹರಿಸಲು ಸೂಕ್ತ ವಿಶ್ರಾಂತಿ ದೊರೆಯುವುದನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ನ್ಯಾಯಾಲಯದ ಅನುಮೋದನೆ ಮೇರೆಗೆ ಎಫ್‌ಡಿಟಿಎಲ್ ಪರಿಷ್ಕೃತ ನಿಯಮಾವಳಿಗಳನ್ನು ರೂಪಿಸಲಾಗಿದೆ. ಆದರೆ, ಡಿಜಿಸಿಎ ಈ ನಿಯಮಾವಳಿಗಳನ್ನು ಸಂಪೂರ್ಣವಾಗಿ ಜಾರಿಗೊಳಿಸದೇ, ವಿಮಾನಯಾನ ಸಂಸ್ಥೆಗಳಿಗೆ ವಿನಾಯತಿಗಳನ್ನು ನೀಡಿದೆ’ ಎಂದು ಇಂಡಿಯನ್ ಪೈಲಟ್ಸ್ ಗಿಲ್ಡ್ ಆರೋಪಿಸಿದೆ.
ಅಲ್ಲದೇ, ಡಿಜಿಸಿಎ ಅನುಸರಿಸಿರುವ ಈ ನಡೆಯು ಸಿವಿಲ್ ಏವಿಯೇಷನ್ ರಿಕ್ವೈರ್‌ಮೆಂಟ್ (ಸಿಎಆರ್)2024 ನಿಯಮದ ಉಲ್ಲಂಘನೆಯೂ ಆಗಿದ್ದು, ಪ್ರಾಧಿಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳಬೇಕು ಎಂದೂ ಅರ್ಜಿಯಲ್ಲಿ ಕೋರಿದೆ.
ನ್ಯಾಯಮೂರ್ತಿ ಅಮಿತ್ ಶರ್ಮಾ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಡಿಜಿಸಿಎಗೆ ನೋಟಿಸ್ ಜಾರಿಗೊಳಿಸಿದೆ. ಜತೆಗೆ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 17ಕ್ಕೆ ನಿಗದಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.