ADVERTISEMENT

ಅತ್ಯಾಚಾರ ಸಂತ್ರಸ್ತೆ ಮೇಲೆ ತಾಯ್ತನದ ಹೊಣೆ ಹೇರುವುದು ಸಲ್ಲ: ದೆಹಲಿ ಹೈಕೋರ್ಟ್‌

ದೆಹಲಿ ಹೈಕೋರ್ಟ್‌ ಅಭಿಮತ

ಪಿಟಿಐ
Published 26 ಜನವರಿ 2023, 15:57 IST
Last Updated 26 ಜನವರಿ 2023, 15:57 IST
ದೆಹಲಿ ಹೈಕೋರ್ಟ್‌ 
ದೆಹಲಿ ಹೈಕೋರ್ಟ್‌    

ನವದೆಹಲಿ: ‘ಅತ್ಯಾಚಾರ ಸಂತ್ರಸ್ತೆಯ ಮೇಲೆ ತಾಯ್ತನದ ಹೊಣೆ ಹೇರುವುದು ಸಲ್ಲ. ಹಾಗೆ ಮಾಡುವುದರಿಂದ ಘನತೆಯಿಂದ ಬದುಕುವ ಆಕೆಯ ಹಕ್ಕನ್ನು ನಿರಾಕರಿಸಿದಂತಾಗುತ್ತದೆ’ ಎಂದು ದೆಹಲಿ ಹೈಕೋರ್ಟ್‌ ಗುರುವಾರ ಹೇಳಿದೆ.

ಅತ್ಯಾಚಾರಕ್ಕೊಳಗಾದ ನಂತರ ಗರ್ಭ ಧರಿಸಿದ್ದ 14 ವರ್ಷದ ಬಾಲಕಿಯೊಬ್ಬಳು 25 ವಾರಗಳ ಭ್ರೂಣ ತೆಗೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಸಂಬಂಧ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ.

‘ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ಮಗುವಿಗೆ ಜನ್ಮ ನೀಡುವಂತೆ ಸಂತ್ರಸ್ತೆಯನ್ನು ಬಲವಂತಪಡಿಸುವುದರಿಂದ ಆಕೆ ಅನುಭವಿಸಲಿರುವ ಸಂಕಟಗಳು ವಿವರಿಸಲಾರದಂತಹವು. ತನ್ನ ಜೀವನದ ಆ ಕರಾಳ ಘಟನೆಯ ನೆನಪುಗಳು ಪ್ರತಿ ದಿನವೂ ಆಕೆಯನ್ನು ಕಾಡಲಿದ್ದು, ಆ ಕೊರಗಲ್ಲೇ ಆಕೆ ನರಳಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಸಂತ್ರಸ್ತೆಯ ಪೋಷಕರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ಆಕೆಯ ತಾಯಿ ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಿದ್ದಾಗ ಆರೋಪಿಯು ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತೆ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

‘ಅತ್ಯಾಚಾರ ಸಂತ್ರಸ್ತೆಯರನ್ನು ಪರೀಕ್ಷೆಗೆ ಒಳಪಡಿಸುವಾಗ ಅವರು ಗರ್ಭ ಧರಿಸಿದ್ದಾರೊ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಬಹುತೇಕ ಸಂದರ್ಭಗಳಲ್ಲಿ ತನಿಖಾಧಿಕಾರಿಗಳು ಆಕೆಯ ಮೂತ್ರದ ಪರೀಕ್ಷೆ ನಡೆಸುವುದೇ ಇಲ್ಲ. ಇನ್ನು ಮುಂದೆ ಈ ಪರೀಕ್ಷೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು’ ಎಂದು ನ್ಯಾಯಪೀಠವು ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.