ನವದೆಹಲಿ: ಚೀನಾದ ಬೇಹುಗಾರಿಕೆ ಅಧಿಕಾರಿಗಳಿಗೆ ಸೂಕ್ಷ್ಮ ಮಾಹಿತಿ ಸೋರಿಕೆಯ ಪ್ರಕರಣದಲ್ಲಿನ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದೆಹಲಿ ಮೂಲದ ಹವ್ಯಾಸಿ ಪತ್ರಕರ್ತ ರಾಜೀವ್ ಶರ್ಮಾ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ದೆಹಲಿ ಹೈ ಕೋರ್ಟ್ ಗುರುವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನೋಟಿಸ್ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತ ಗುಪ್ತಾ ಅವರು, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ವಾರ ಗಳಲ್ಲಿ ವರದಿ ಸಲ್ಲಿಸುವಂತೆ ಇ.ಡಿಗೆ ಸೂಚಿಸಿದ್ದಾರೆ. ಹಾಗೆಯೇ, ಹವ್ಯಾಸಿ ಪತ್ರಕರ್ತನಿಗೆ ಅಕ್ರಮ ಹಣ ವಹಿವಾಟಿನೊಂದಿಗಿರುವ ಸಂಪರ್ಕವನ್ನು ಸ್ಪಷ್ಟಪಡಿಸುವಂತೆ ಸೂಚಿಸಿದೆ.
‘ಅರ್ಜಿದಾರ ಶೆಲ್ ಕಂಪನಿಯಿಂದ ಹಣವನ್ನು ಸ್ವೀಕರಿಸಿದ್ದರೆ, ಅದು ಕಾನೂನುಬಾಹಿರವಾಗುತ್ತದೆ. ಆದರೆ ಇದನ್ನು ಸಾಬೀತುಪಡಿಸಲು ನಿಖರವಾದ ಪುರಾವೆಗಳು ಬೇಕು‘ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಪರ ಹಾಜರಾದ ವಕೀಲರಿಗೆ ನ್ಯಾಯಪೀಠ ತಿಳಿಸಿತು.
ಇದಕ್ಕೂ ಮುನ್ನ ಇ.ಡಿ ಪರ ಹಾಜರಾಗಿದ್ದ ವಕೀಲ ಝೊಹೆಬ್ ಹುಸ್ಸೇನ್, ‘ಚೀನಾ ಮೂಲದ ಶೆಲ್ ಕಂಪನಿಯಿಂದ ನಗದು ರೂಪದಲ್ಲಿ ರಾಜೀವ್ ಶರ್ಮಾ ಹಣ ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ‘ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.