ADVERTISEMENT

ಪ್ರಧಾನಿ ವಿದೇಶ ಪ್ರವಾಸ: ಸಿಐಸಿ ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ

ಪಿಟಿಐ
Published 11 ಡಿಸೆಂಬರ್ 2020, 14:49 IST
Last Updated 11 ಡಿಸೆಂಬರ್ 2020, 14:49 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ನವದೆಹಲಿ: ಪ್ರಧಾನಿ ಅವರ ವಿದೇಶ ಪ್ರವಾಸದ ವಿವರ ಇರುವಂಥ ‘ಸ್ಪೆಷಲ್‌ ಫ್ಲೈಟ್‌ ರಿಟರ್ನ್ಸ್‌(ಎಸ್‌ಆರ್‌ಎಫ್‌)’ ಮಾಹಿತಿ ನೀಡುವಂತೆ ನಿರ್ದೇಶಿಸಿ ಕೇಂದ್ರ ಮಾಹಿತಿ ಆಯೋಗವು(ಸಿಐಸಿ) ಭಾರತೀಯ ವಾಯುಪಡೆಗೆ(ಐಎಎಫ್‌) ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.

‘ಮಾಹಿತಿ ಹಕ್ಕು(ಆರ್‌ಟಿಐ) ಅರ್ಜಿದಾರರು ಕೋರಿರುವ, ಪ್ರವಾಸದಲ್ಲಿ ಪ್ರಧಾನಿ ಅವರ ಜೊತೆಗಿದ್ದ ಸಚಿವಾಲಯ ಅಥವಾ ಇಲಾಖೆಯ ಅಧಿಕಾರಿಗಳ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆಯ ಮಾಹಿತಿಯನ್ನು ನೀಡುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಆರ್‌ಟಿಐಯಡಿ ಯಾವ ಮಾಹಿತಿಯನ್ನು ನೀಡಬಹುದು, ಯಾವುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎನ್ನುವ ವಿಚಾರದಲ್ಲಿ ಸಿಐಸಿ ಇನ್ನಷ್ಟು ಸ್ಪಷ್ಟವಾಗಿರಬೇಕಿತ್ತು’ ಎಂದು ನ್ಯಾಯಮೂರ್ತಿ ನವೀನ್‌ ಚಾವ್ಲಾ ಅವರು ಹೇಳಿದರು.

ಆರ್‌ಟಿಐ ಅರ್ಜಿದಾರ ನಿವೃತ್ತ ಕಮಾಂಡರ್‌ ಲೊಕೇಶ್‌ ಕೆ. ಬಾತ್ರ ಅವರಿಗೆ ನೋಟಿಸ್‌ ನೀಡಿರುವ ಹೈಕೋರ್ಟ್‌, ಜುಲೈ 8ರಂದು ಸಿಐಸಿ ನೀಡಿರುವ ನಿರ್ದೇಶನದ ವಿರುದ್ಧ ಐಎಎಫ್‌ ದಾಖಲಿಸಿರುವ ಅರ್ಜಿಯ ಬಗ್ಗೆ ನಿಲುವು ತಿಳಿಸಲು ಸೂಚಿಸಿದೆ. ವಿಚಾರಣೆಯನ್ನು 2021ರ ಏ.12ಕ್ಕೆ ಮುಂದೂಡಿರುವ ನ್ಯಾಯಾಲವು, ಅಲ್ಲಿಯವರೆಗೂ ಸಿಐಸಿ ನಿರ್ದೇಶನಕ್ಕೆ ತಡೆ ನೀಡಿದೆ.

ADVERTISEMENT

ಬಾತ್ರ ಅವರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಎಸ್‌ಆರ್‌ಎಫ್‌–1 ಹಾಗೂ ಎಸ್‌ಆರ್‌ಎಫ್‌–2ರ ಅಧಿಕೃತ ಮಾಹಿತಿಯನ್ನು ಕೇಳಿದ್ದರು. ‘ಆರ್‌ಟಿಐ ಅರ್ಜಿದಾರರು ಕೋರಿರುವ ಮಾಹಿತಿಯು ಆರ್‌ಟಿಐ ಕಾಯ್ದೆಯಿಂದ ಹೊರಗಿದೆ. ಐಎಎಫ್‌, ವಿಮಾನದಲ್ಲಿದ್ದ ಪ್ರಯಾಣಿಯಕರ ಸಂಖ್ಯೆಯ ಎಸ್‌ಆರ್‌ಎಫ್‌–1 ಮಾಹಿತಿ ನೀಡಲಾಗಿದೆ. ಎಸ್‌ಆರ್‌ಎಫ್‌–2 ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಅದರಲ್ಲಿ ಎಸ್‌ಪಿಜಿ, ಭದ್ರತಾ ವಿಭಾಗ ಹಾಗೂ ವಿಮಾನದಲ್ಲಿದ್ದ ಇತರೆ ಅಧಿಕಾರಿಗಳ ರ್‍ಯಾಂಕ್‌ ಮತ್ತು ಹೆಸರು ಇದೆ. ಪ್ರಧಾನಿ ಜೊತೆ ವಿಮಾನದಲ್ಲಿ ಎಷ್ಟು ಜನರಿದ್ದರು ಎನ್ನುವ ಮಾಹಿತಿಯನ್ನೂ ನೀಡುವುದೂ ಪ್ರಧಾನಿ ಅವರ ಭದ್ರತೆಗೆ ಲೋಪ ಆಗುತ್ತದೆ. ಈ ಮಾಹಿತಿಯು ದುರ್ಬಳಕೆ ಆಗಬಹುದು’ ಎಂದು ಐಎಎಫ್‌ ನ್ಯಾಯಾಲಯಕ್ಕೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.