ADVERTISEMENT

ಎಟಿಪಿಎಂಎಲ್ ಕಾರ್ಯಾರಂಭಿಸಲು ಕಾಲಮಿತಿ ನಿಗದಿಪಡಿಸಿ; ಕೇಂದ್ರಕ್ಕೆ ದೆಹಲಿ ಹೈಕೋರ್ಟ್

ಪಿಟಿಐ
Published 14 ಸೆಪ್ಟೆಂಬರ್ 2021, 16:31 IST
Last Updated 14 ಸೆಪ್ಟೆಂಬರ್ 2021, 16:31 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಮೇಲ್ಮನವಿ ನ್ಯಾಯಮಂಡಳಿಯ (ಎಟಿಪಿಎಂಎಲ್‌ಎ) ಕಾರ್ಯಾರಂಭ, ಅಧ್ಯಕ್ಷ ಮತ್ತು ಸದಸ್ಯರ ಸ್ಥಾನಗಳ ಭರ್ತಿಗೆ ಕಾಲಮಿತಿ ನಿಗದಿ ಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಶೀಘ್ರದಲ್ಲೇ ನ್ಯಾಯಮಂಡಳಿಯನ್ನು ಕಾರ್ಯಾಚರಿಸುವಂತೆ ಮಾಡಲು ಕಾಲಮಿತಿ ನಿಗದಿ ಪಡಿಸದಿರುವುದು ದುರದೃಷ್ಟಕರ ಎಂದು ನ್ಯಾಯಮೂರ್ತಿ ರೇಖಾ ಪಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಫುಲರ್ಟನ್‌ ಇಂಡಿಯಾ ಕ್ರೆಡಿಟ್‌ ಕಂಪನಿ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 7ಕ್ಕೆ ಮುಂದೂಡಿದೆ.

ADVERTISEMENT

ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ರಚನೆಯಾಗಿರುವ ಮೇಲ್ಮನವಿ ನ್ಯಾಯಮಂಡಳಿಗೆ ಮುಖ್ಯಸ್ಥರನ್ನೇ ಪ್ರಮುಖ ಅಧಿಕಾರಿಯಾಗಿ ನೇಮಕ ಮಾಡಲು ನಿರ್ದೇಶಿಸುವಂತೆ ಕೋರಿ ಕಂಪನಿಯು ಅರ್ಜಿ ಸಲ್ಲಿಸಿದೆ. ಅಕ್ರಮ ಹಣ ವರ್ಗಾವಣೆ ಸೇರಿದಂತೆ ಆರ್ಥಿಕ ಅಪರಾಧ ಪ್ರಕರಣಗಳ ವಿಚಾರಣೆಯನ್ನು ಮೇಲ್ಮನವಿ ನ್ಯಾಯಮಂಡಳಿಯು ನಡೆಸಲಿದೆ.

ನ್ಯಾಯಮಂಡಳಿ ಸುಧಾರಣೆ ಕಾಯ್ದೆ, 2021ಕ್ಕೆ ಇತ್ತೀಚೆಗೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. ಹೊಸ ನಿಯಮಗಳ ಅಧಿಸೂಚನೆಯಾಗುತ್ತಿದ್ದಂತೆ ಅಧ್ಯಕ್ಷ ಮತ್ತು ಸದಸ್ಯರ ಸ್ಥಾನಗಳ ಭರ್ತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ. ಸೆಪ್ಟೆಂಬರ್‌ 14ರೊಳಗೆ ದೆಹಲಿಯಲ್ಲಿ ಎಟಿಪಿಎಂಎಲ್‌ಎ ಕಾರ್ಯಾಚರಿಸುವುದನ್ನು ಖಚಿತ ಪಡಿಸಿಕೊಳ್ಳುವಂತೆ ಕೇಂದ್ರಕ್ಕೆ ಕೋರ್ಟ್‌ ಆಗಸ್ಟ್‌ 5ರಂದು ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.