ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ– ಸಂತ್ರಸ್ತೆಯರ ಗುರುತು ಬಹಿರಂಗ ಬೇಡ: ದೆಹಲಿ ಹೈಕೋರ್ಟ್‌

ಪಿಟಿಐ
Published 26 ಜನವರಿ 2026, 15:31 IST
Last Updated 26 ಜನವರಿ 2026, 15:31 IST
<div class="paragraphs"><p>ದೆಹಲಿ ಹೈಕೋರ್ಟ್‌</p></div>

ದೆಹಲಿ ಹೈಕೋರ್ಟ್‌

   

ನವದೆಹಲಿ: ‘ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಸಲ್ಲಿಸುವ ಸ್ಥಿತಿಗತಿ ವರದಿಗಳು ಅಥವಾ ಇತರೆ ಯಾವುದೇ ದಾಖಲೆಗಳಲ್ಲಿ ಸಂತ್ರಸ್ತೆಯರ ಹೆಸರು, ಪೋಷಕರ ಹೆಸರು ಮತ್ತು ಅವರ ಮನೆ ವಿಳಾಸದಂಥ ಮಾಹಿತಿಗಳನ್ನು ಬಹಿರಂಗಪಡಿಸಬಾರದು’ ಎಂದು ದೆಹಲಿ ಹೈಕೋರ್ಟ್‌ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದೆ.

ಪೋಕ್ಸೊ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ದೆಹಲಿಯ ಪೊಲೀಸ್‌ ಕಮಿಷನರ್‌ ಅವರನ್ನು ನ್ಯಾಯಾಲಯಕ್ಕೆ ಕರೆಸಿ ಈ ನಿರ್ದೇಶನ ನೀಡಿದ್ದಾರೆ. ತಮ್ಮ ವ್ಯಾಪ್ತಿಯ ಎಲ್ಲ ಠಾಣಾಧಿಕಾರಿಗಳು ಮತ್ತು ತನಿಖಾಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು ಎಂದೂ ತಾಕೀತು ಮಾಡಿದ್ದಾರೆ. 

ADVERTISEMENT

ಪೊಲೀಸರು ತಾವು ಸಲ್ಲಿಸಿದ್ದ ವರದಿಯಲ್ಲಿ ದೂರು ನೀಡಿದ ಸಂತ್ರಸ್ತೆ ಹೆಸರನ್ನು ಉಲ್ಲೇಖಿಸಿದ್ದರು. ವಿಚಾರಣೆ ವೇಳೆ ಇದನ್ನು ಗಮನಿಸಿದ ನ್ಯಾಯಾಲಯವು ಈ ಬಗ್ಗೆ ಕಳವಳ ವ್ಯಕ್ತಪಡಿಸಿತು. ‘ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಬಾರದು ಎಂದು ಕಾನೂನಲ್ಲಿದೆ. ಇದನ್ನು ಎಲ್ಲರೂ ಪಾಲಿಸಲೇಬೇಕು’ ಎಂದಿತು.

‘ವರದಿಗಳಲ್ಲಿ ಸಂತ್ರಸ್ತೆಯ ಗುರುತು ಬಹಿರಂಗವಾಗದಂತೆ ನೋಡಿಕೊಳ್ಳುವ ಬಗ್ಗೆ ಇರುವ ಕಾನೂನು ಪಾಲಿಸುವಂತೆ ತನಿಖಾಧಿಕಾರಿಗಳಿಗೆ ಸೂಚನೆ ನೀಡಿ. ಈ ಆದೇಶದ ಪ್ರತಿಯನ್ನು ಎಲ್ಲ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳಿಗೆ ತಲುಪಿಸಬೇಕು’ ಎಂದು ದೆಹಲಿಯ ಪೊಲೀಸ್‌ ಕಮಿಷನರ್‌ ಮತ್ತು ಡಿಸಿಪಿಗಳಿಗೆ ನ್ಯಾಯಾಲಯ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.