ADVERTISEMENT

ದೆಹಲಿಯಲ್ಲಿ ಮುಂದುವರೆದ ಮಳೆ: ನೀಗದ ಸಂಕಷ್ಟ, ಲೆಫ್ಟಿನೆಂಟ್ ಗವರ್ನರ್– ಎಎಪಿ ಜಟಾಪಟಿ

ಪಿಟಿಐ
Published 11 ಜುಲೈ 2023, 14:15 IST
Last Updated 11 ಜುಲೈ 2023, 14:15 IST
ದೆಹಲಿಯ ಯಮುನಾ ಬಜಾರ್‌ ಪ್ರದೇಶದಲ್ಲಿ ನಿಂತಿರುವ ಮಳೆ ನೀರಿನಲ್ಲಿಯೇ ಮಹಿಳೆಯೊಬ್ಬರು ಸಾಗುತ್ತಿದ್ದುದು ಮಂಗಳವಾರ ಕಂಡುಬಂತು
ದೆಹಲಿಯ ಯಮುನಾ ಬಜಾರ್‌ ಪ್ರದೇಶದಲ್ಲಿ ನಿಂತಿರುವ ಮಳೆ ನೀರಿನಲ್ಲಿಯೇ ಮಹಿಳೆಯೊಬ್ಬರು ಸಾಗುತ್ತಿದ್ದುದು ಮಂಗಳವಾರ ಕಂಡುಬಂತು    –ಪಿಟಿಐ ಚಿತ್ರ

ನವದೆಹಲಿ: ಮಳೆಯ ಆರ್ಭಟದಿಂದಾಗಿ ದೆಹಲಿಯಲ್ಲಿ ಯಮುನಾ ನದಿ ಮಂಗಳವಾರವೂ ಉಕ್ಕಿ ಹರಿದಿದ್ದು, ಅನೇಕ ವಸತಿ ಪ್ರದೇಶಗಳಲ್ಲಿ 2–3 ಅಡಿಗಳಷ್ಟು ನೀರು ನಿಂತ ಕಾರಣ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಅಪಾಯ ಮಟ್ಟ 205.33 ಮೀಟರ್‌ ಗಡಿ ದಾಟಿ ನದಿ ಹರಿಯುತ್ತಿದ್ದ ಕಾರಣ, ತಗ್ಗುಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಿಸಲಾಗಿದೆ. ಹಳೆ ಯಮುನಾ ಸೇತುವೆ ಮೇಲೆ ವಾಹನ ಮತ್ತು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರವಾಹಪೀಡಿತ ಪ್ರದೇಶಗಳ ಮೇಲೆ ಕಣ್ಗಾವಲಿರಿಸುವ ಸಂಬಂಧ 16 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ADVERTISEMENT

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅಧಿಕಾರಿಗಳ ಸಭೆ ನಡೆಸಿ, ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿರುವುದು ಹಾಗೂ ನಗರದ ವಿವಿಧೆಡೆ ನೀರು ನಿಂತು ಉಂಟಾಗಿರುವ ಸಮಸ್ಯೆ ಕುರಿತು ಚರ್ಚಿಸಿದರು.

ಭಾರಿ ಮಳೆ ಕಾರಣ ಹರಿಯಾಣದ ಹಥಿನಿಕುಂಡ ಬ್ಯಾರೇಜ್‌ಗೆ ಒಳಹರಿವು ಹೆಚ್ಚಿದೆ. ಹಾಗಾಗಿ, ಬ್ಯಾರೇಜ್‌ನಿಂದ ನೀರು ಬಿಟ್ಟಿರುವ ಕಾರಣ ದೆಹಲಿಯಲ್ಲಿ ಯಮುನಾ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ಉಂಟಾಗಿರುವ ತೊಂದರೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ಹೇಳಿವೆ. 

ಆರೋಪ–ಪ್ರತ್ಯಾರೋಪ: ಭಾರಿ ಮಳೆಯಿಂದಾಗಿ ದೆಹಲಿಯಲ್ಲಿ ಉಂಟಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ನಡುವೆ ಜಟಾಪಟಿ ಶುರುವಾಗಿದೆ.

‘ನಗರದ ಒಳಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿಲ್ಲ. ಹೀಗಾಗಿಯೇ ಮಳೆ ಬಂದಾಗ ನೀರು ನಿಲ್ಲುವಂತಹ ‘ವಾರ್ಷಿಕ ವಿಧಿ’ಯನ್ನು ನಗರ ಎದುರಿಸುವಂತಾಗಿದೆ’ ಎಂದು ಸಕ್ಸೇನಾ ಹೇಳಿದ್ದಾರೆ. ಇದಕ್ಕೆ ಎಎಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಸಕ್ಸೇನಾ ಅವರ ಹೇಳಿಕೆಯನ್ನು ಖಂಡಿಸಿರುವ ದೆಹಲಿ ಜಲ ಸಚಿವ ಸೌರಭ್‌ ಭಾರದ್ವಾಜ್, ‘ಒಳಚರಂಡಿಗಳಲ್ಲಿ ಹೂಳು ತೆಗೆಯಲಾಗಿದೆ ಹಾಗೂ ಯಮುನಾ ನದಿಯನ್ನು ಸ್ವಚ್ಛಗೊಳಿಸಲಾಗಿದೆ ಎಂದು ಸಕ್ಸೇನಾ ಈ ಹಿಂದೆ ಹೇಳಿದ್ದರು. ಈಗ ಅವರೇ ಆರೋಪ ಮಾಡುತ್ತಿದ್ದಾರೆ’ ಎಂದಿದ್ದಾರೆ.

ದೆಹಲಿಯಲ್ಲಿ ತುಂಬಿ ಹರಿಯುತ್ತಿರುವ ಯಮುನಾ ನದಿಯಲ್ಲಿ ಮಂಗಳವಾರ ಮಕ್ಕಳು ಆಟವಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.