ADVERTISEMENT

ಎಂಸಿಡಿ ಸ್ಥಾಯಿ ಸಮಿತಿಗೆ ಮರು ಚುನಾವಣೆ ಸಂವಿಧಾನ ವಿರೋಧಿ ನಡೆ: ಬಿಜೆಪಿ

ಪಿಟಿಐ
Published 25 ಫೆಬ್ರುವರಿ 2023, 13:18 IST
Last Updated 25 ಫೆಬ್ರುವರಿ 2023, 13:18 IST
   

ನವದೆಹಲಿ: ‘ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಸ್ಥಾಯಿ ಸಮಿತಿಗೆ ಬಿಜೆಪಿ ಹಾಗೂ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ (ಎಎಪಿ) ತಲಾ ಮೂವರನ್ನು ಸದಸ್ಯರನ್ನಾಗಿ ನೇಮಿಸುವಂತೆ ತಾಂತ್ರಿಕ ಪರಿಣತರು ಸೂಚಿಸಿದ್ದಾರೆ. ಮೇಯರ್‌ ಶೆಲ್ಲಿ ಒಬೆರಾಯ್‌ ಅವರು ಇದಕ್ಕೆ ಸಮ್ಮತಿ ಸೂಚಿಸಬೇಕು. ಈ ಫಲಿತಾಂಶವನ್ನು ಅವರು ಪ್ರಕಟಿಸಬೇಕು’ ಎಂದು ಬಿಜೆಪಿ ದೆಹಲಿ ಘಟಕವು ಆಗ್ರಹಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ದೆಹಲಿ ಘಟಕದ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ, ‘ಶೆಲ್ಲಿ ಒಬೆರಾಯ್‌ ಅವರು ಆರು ಸದಸ್ಯರ ಆಯ್ಕೆಗಾಗಿ ಮರು ಚುನಾವಣೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ’ ಎಂದು ದೂರಿದ್ದಾರೆ.

‘ಬಿಜೆಪಿ ಸದಸ್ಯರು ಸೋಮವಾರ ಪಾಲಿಕೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೇಯರ್‌ ಅವರು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ. ನಮ್ಮ ಬೇಡಿಕೆ ಈಡೇರದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ’ ಎಂದಿದ್ದಾರೆ.

ADVERTISEMENT

ಶುಕ್ರವಾರ ನಡೆದಿದ್ದ ಚುನಾವಣೆ ವೇಳೆ ಶೆಲ್ಲಿ ಒಬೆರಾಯ್‌ ಅವರು ಒಂದು ಮತ ಅಮಾನ್ಯವಾಗಿರುವುದಾಗಿ ಘೋಷಿಸಿದ್ದರು. ಹೀಗಾಗಿ ಸಭೆಯಲ್ಲಿ ಎಎಪಿ ಮತ್ತು ಬಿಜೆಪಿ ಸದಸ್ಯರ ನಡುವೆ ಹೊಡೆದಾಟ ನಡೆದಿತ್ತು. ಗದ್ದಲವೂ ಏರ್ಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.