ADVERTISEMENT

ದೆಹಲಿ: ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ, ನಾಲ್ವರು ವಶಕ್ಕೆ

ಪಿಟಿಐ
Published 19 ಮೇ 2022, 4:11 IST
Last Updated 19 ಮೇ 2022, 4:11 IST
   

ನವದೆಹಲಿ: ಕೆಲ ದಿನಗಳ ಹಿಂದೆ ದಕ್ಷಿಣ ದೆಹಲಿಯಿಂದ ಕಾಣೆಯಾಗಿದ್ದ 13 ವರ್ಷದ ಬಾಲಕಿಯನ್ನು ಸಾಕೇತ್ ಮೆಟ್ರೊ ನಿಲ್ದಾಣದ ಬಳಿ ರಕ್ಷಿಸಲಾಗಿದೆ.

ವಿಚಾರಣೆ ವೇಳೆ ಬಾಲಕಿಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ದೃಢಪಟ್ಟಿದೆ. ಬಳಿಕ, ಆರೋಪಿಗಳು ಆಕೆಯನ್ನು ಟಿಕ್ರಿ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ.

ಪ್ರಕರಣ ಸಂಬಂಧ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಮೋಹಿತ್ (20), ಆಕಾಶ್ (19), ಶಾರೂಖ್ (20) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಏಪ್ರಿಲ್ 24ರ ಸಂಜೆ 5 ಗಂಟೆಗೆ ಮನೆಯಿಂದ ತೆರಳಿದ್ದ ಬಾಲಕಿವಾಪಸ್ ಆಗಿರಲಿಲ್ಲ. ಸ್ನೇಹಿತರು ಅಥವಾ ಸಂಬಂಧಿಕರ ಮನೆಗೆ ತೆರಳಿರಬಹುದೆಂದು ಪೋಷಕರು ಭಾವಿಸಿದ್ದರು. ರಾತ್ರಿಯಾದರೂ ಮಗಳು ಬಾರದಿದ್ದರಿಂದ ಭಯಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಮೇ 1ರಂದು ದಕ್ಷಿಣ ದೆಹಲಿಯಲ್ಲಿ ಬಾಲಕಿಯನ್ನು ಕರೆದೊಯ್ದಿದ್ದ ಆರೋಪಿ ಬಗ್ಗೆ ಮಾಹಿತಿದಾರರಿಂದ ಮಾಹಿತಿ ಸಿಕ್ಕಿತ್ತು. ಬಳಿಕ ಆತನನ್ನು ಬಂಧಿಸಿದ ಪೊಲೀಸರು ಆತ ನೀಡಿದ ಮಾಹಿತಿ ಮೇರೆಗೆ ಉಳಿದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು ಅತ್ಯಾಚಾರ ನಡೆಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಡಿಸಿಪಿ ಬೆನಿತಾ ಮೇರಿ ಜೈಕರ್ ತಿಳಿಸಿದ್ದಾರೆ.

ಮರುದಿನ, ಪೋಸ್ಟರ್‌ನಲ್ಲಿರುವ ಕಾಣೆಯಾಗಿರುವ ಬಾಲಕಿಯನ್ನು ಸಾಕೆತ್ ಮೆಟ್ರೋ ನಿಲ್ದಾಣದ ಬಳಿ ನೋಡಿದ್ದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲಿಸರು ಸ್ಥಳಕ್ಕೆ ಹೋದಾಗ ಬಾಲಕಿ ಮತ್ತಿನಲ್ಲಿದ್ದಳು. ಆರೋಪಿಗಳು ಮತ್ತಿನ ಔಷಧವನ್ನು ಆಕೆಗೆ ತಿನ್ನಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ, ಏಮ್ಸ್‌ ಆಸ್ಪತ್ರೆಗೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.