ADVERTISEMENT

ಒಂದು ವರ್ಷದ ಅವಧಿಯಲ್ಲಿ ದೇಶದಲ್ಲೇ ಅತ್ಯಂತ ಕಲುಷಿತ ನಗರ ದೆಹಲಿ: ವರದಿ

ಪಿಟಿಐ
Published 4 ಅಕ್ಟೋಬರ್ 2023, 10:49 IST
Last Updated 4 ಅಕ್ಟೋಬರ್ 2023, 10:49 IST
   

ನವದೆಹಲಿ: ಪ್ರತಿ ವರ್ಷ ಮಾಲಿನ್ಯದಿಂದಲೇ ಸುದ್ದಿ ಮಾಡುವ ದೇಶದ ರಾಜಧಾನಿ ದೆಹಲಿಗೆ ಒಂದು ವರ್ಷದಲ್ಲಿ ದೇಶದಲ್ಲೇ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಸಿಕ್ಕಿದೆ. ಸೆಪ್ಟೆಂಬರ್ 30ರವರೆಗಿನ ಒಂದು ವರ್ಷದ ಅವಧಿಯಲ್ಲಿ ದೆಹಲಿ ಅತ್ಯಂತ ಮಲಿನಗೊಂಡಿರುವ ನಗರ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ.

ವಾಯುಮಾಲಿನ್ಯವನ್ನು ಅಂದಾಜು ಮಾಡುವ ಪಿಎಂ2.5 ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 100.1 ಮೈಕ್ರೋಗ್ರಾಂನಷ್ಟಿದೆ. ಅಂದರೆ, ಸರ್ಕಾರ ನಿಗದಿ ಮಾಡಿರುವ ಸುರಕ್ಷಿತ ಮಟ್ಟಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ವಿಶ್ಲೇಷಣೆಯೊಂದು ತಿಳಿಸಿದೆ.

ಕ್ಲೈಮೆಟ್ ಟ್ರೆಂಡ್ಸ್ ಮತ್ತು ಟೆಕ್ ಫರ್ಮ್ ರೆಸ್ಪಿರರ್ ಲಿವಿಂಗ್ ಸೈನ್ಸಸ್ ಎಂಬ ಸ್ವತಂತ್ರ ಚಿಂತಕರ ಚಾವಡಿಯು ಈ ವಿಶ್ಲೇಷಣೆ ಮಾಡಿದೆ. ಸಂಸ್ಥೆ ನೀಡಿರುವ ವರದಿ ಅನ್ವಯ ಐಜ್ವಾಲ್ ಮತ್ತು ಮಿಜೋರಾಂ ಪ್ರದೇಶಗಳು ದೇಶದಲ್ಲೇ ಅತ್ಯಂತ ಶುದ್ಧ ಗಾಳಿಯನ್ನು ಹೊಂದಿದ್ದು, ಪಿಎಂ2.5 ಪ್ರಮಾಣವು ಪ್ರತಿ ಘನ ಮೀಟರ್‌ಗೆ 11.1 ಮೈಕ್ರೋಗ್ರಾಂಗಳಷ್ಟು ಇದೆ ಎಂದು ತಿಳಿದುಬಂದಿದೆ.

ADVERTISEMENT

ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಬರುವ ಫರಿದಾಬಾದ್ (ಪ್ರತಿ ಘನ ಮೀಟರ್‌ಗೆ 89 ಮೈಕ್ರೋಗ್ರಾಂಗಳು), ನೋಯ್ಡಾ (ಪ್ರತಿ ಘನ ಮೀಟರ್‌ಗೆ 79.1 ಮೈಕ್ರೋಗ್ರಾಂಗಳು), ಘಾಜಿಯಾಬಾದ್ (ಪ್ರತಿ ಘನ ಮೀಟರ್‌ಗೆ 78.3 ಮೈಕ್ರೋಗ್ರಾಂಗಳು) ಮತ್ತು ಮೀರತ್ (ಪ್ರತಿ ಘನ ಮೀಟರ್‌ಗೆ 76.9 ಮೈಕ್ರೋಗ್ರಾಂಗಳು) ನಗರಗಳು ಟಾಪ್ 10ರ ಅತ್ಯಂತ ಕಲುಷಿತ ನಗರಗಳ ಸಾಲಿನಲ್ಲಿವೆ.

ವರದಿಯು ಅಕ್ಟೋಬರ್ 1, 2022ರಿಂದ ಸೆಪ್ಟೆಂಬರ್ 30, 2023ರವರೆಗಿನ ಸರ್ಕಾರದ ಪಿಎಂ2.5 ದತ್ತಾಂಶದ ವಿಶ್ಲೇಷಣೆಯನ್ನು ಆಧರಿಸಿದೆ. ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಅಡಿಯಲ್ಲಿ ಬರುವ ನಗರಗಳ ಮೇಲೆ ಕೇಂದ್ರೀಕರಿಸಿದೆ. ಯೋಜನೆಯಡಿ 2026ರ ಹೊತ್ತಿಗೆ ಈ ನಗರಗಳಲ್ಲಿ ಪಿಎಂ2.5 ಕಣಗಳ ಸಾಂದ್ರತೆಯಲ್ಲಿ ಶೇಕಡ 40ರಷ್ಟು ತಗ್ಗಿಸುವ ಗುರಿಯನ್ನು ಹೊಂದಲಾಗಿದೆ.

ಬಿಹಾರದ ರಾಜಧಾನಿ ಪಟ್ನಾವು ಒಂದು ಘನ ಮೀಟರ್‌ಗೆ ಸರಾಸರಿ 99.7 ಮೈಕ್ರೋಗ್ರಾಂಗಳಷ್ಟು ಪಿಎಂ2.5 ಸಾಂದ್ರತೆಯೊಂದಿಗೆ ಎರಡನೇ ಅತಿ ಹೆಚ್ಚು ಮಾಲಿನ್ಯಗೊಂಡಿರುವ ನಗರವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗರದ ಗಾಳಿಯ ಗುಣಮಟ್ಟವು ಶೇಕಡ 24ರಷ್ಟು ಕ್ಷೀಣಿಸಿದೆ ಎಂದು ವಿಶ್ಲೇಷಣೆ ತೋರಿಸಿದೆ.

ದೆಹಲಿ, ಪಟ್ನಾ, ಮುಜಾಫರ್‌ಪುರ್, ಫರಿದಾಬಾದ್, ನೋಯ್ಡಾ, ಗಾಜಿಯಾಬಾದ್ ಮತ್ತು ಮೀರತ್ ದೇಶದ ಪ್ರಮುಖ ಏಳು ಕಲುಷಿತ ನಗರಗಳಾಗಿವೆ.

ಅಧ್ಯಯನದ ಅವಧಿಯಲ್ಲಿ ದೆಹಲಿ, ಫರಿದಾಬಾದ್, ನೋಯ್ಡಾ, ಘಾಜಿಯಾಬಾದ್ ಮತ್ತು ಮೀರತ್‌ನಲ್ಲಿ ಪಿಎಂ 2.5 ಸಾಂದ್ರತೆಯು ಕ್ರಮವಾಗಿ ಶೇಕಡ 4, 12, 12, 25 ಮತ್ತು 11ರಷ್ಟು ಕಡಿಮೆಯಾಗಿರುವುದನ್ನು ವಿಶ್ಲೇಷಕರು ಗಮನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.