ADVERTISEMENT

ದೆಹಲಿ: ರಾತ್ರಿ 8ಕ್ಕೂ ಮುನ್ನ ಪಟಾಕಿ ಸಿಡಿಸಿದವರ ವಿರುದ್ಧ ಎಫ್‌ಐಆರ್‌

ಏಜೆನ್ಸೀಸ್
Published 8 ನವೆಂಬರ್ 2018, 8:11 IST
Last Updated 8 ನವೆಂಬರ್ 2018, 8:11 IST
   

ನವದೆಹಲಿ:ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಸಮರ್ಪಕ ಅನುಷ್ಠಾನದ ನಿಟ್ಟಿನಲ್ಲಿ ದೆಹಲಿ ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದು ಬುಧವಾರದ ‘ಬಡೀ ದಿವಾಲಿ’ (ದೊಡ್ಡ ದೀಪಾವಳಿ) ಯಂದು ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದವರು ಮತ್ತು ರಾತ್ರಿ 8 ಗಂಟೆಗೂ ಮುನ್ನ ಪಟಾಕಿ ಸಿಡಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸುಮಾರು 600 ಕೆ.ಜಿ ಪಟಾಕಿಯನ್ನು ವಶಪಡಿಸಿಕೊಂಡಿದ್ದು, 100ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ವಾಯುವ್ಯ ದೆಹಲಿಯಲ್ಲಿ ಪರವಾನಗಿ ಇಲ್ಲದೆ ಮಾರಾಟ ಮಾಡಲಾಗುತ್ತಿದ್ದ 140 ಕೆ.ಜಿ ಪಟಾಕಿ ವಶಪಡಿಸಿಕೊಂಡಿದ್ದು 57 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇನ್ನು ದ್ವಾರಕದಲ್ಲಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಮತ್ತು ರಾತ್ರಿ 8 ಗಂಟೆಗೂ ಮುನ್ನ ಪಟಾಕಿ ಸಿಡಿಸಿದವರು ಸೇರಿ 42 ಮಂದಿ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.ಆಗ್ನೇಯ ದೆಹಲಿಯಲ್ಲಿ ಪೊಲೀಸರು 23 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, 17 ಜನರನ್ನು ಬಂಧಿಸಿದ್ದಾರೆ. ಜೊತೆಗೆ 278 ಕೆ.ಜಿ ಪಟಾಕಿಯನ್ನು ವಶ ಪಡಿಸಿಕೊಂಡಿದ್ದಾರೆ.

ADVERTISEMENT

‘ಕಡಿಮೆ ಮಾಲಿನ್ಯವುಂಟು ಮಾಡುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದು’ ಎಂದು ಸುಪ್ರೀಂಕೋರ್ಟ್ ಅಕ್ಟೋಬರ್‌ 23ರಂದು ಹೇಳಿತ್ತು. ದೀಪಾವಳಿಯ ಮುನ್ನ ದಿನದಂದು ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಎಲ್ಲೆಡೆ ಹೊಗೆ–ಮಂಜು ಆವರಿಸಿತ್ತು.ಗುರುವಾರ ಬೆಳಿಗ್ಗೆ 8.30ಕ್ಕೆ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ 458 ಮೈಕ್ರೋ ಗ್ರಾಂನಷ್ಟು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.