ADVERTISEMENT

ರೈಲು–ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿ ತಲುಪಿ:ಪ್ರಯಾಣಿಕರಿಗೆ ದೆಹಲಿ ಪೊಲೀಸರ ಸಲಹೆ

ಏಜೆನ್ಸೀಸ್
Published 13 ನವೆಂಬರ್ 2025, 13:35 IST
Last Updated 13 ನವೆಂಬರ್ 2025, 13:35 IST
<div class="paragraphs"><p>ದೆಹಲಿಯಲ್ಲಿ ಪೊಲೀಸ್ ಭದ್ರತೆ&nbsp;</p></div>

ದೆಹಲಿಯಲ್ಲಿ ಪೊಲೀಸ್ ಭದ್ರತೆ 

   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಡ್ಡಾಯ ತಪಾಸಣೆಯ ವೇಳೆ ವಿಳಂಬವನ್ನು ತಪ್ಪಿಸುವ ಸಲುವಾಗಿ ಪ್ರಯಾಣಿಕರು ತಾವು ಪ್ರಯಾಣಿಸುವ ರೈಲು, ಮೆಟ್ರೊ ಮತ್ತು ವಿಮಾನಗಳು ಹೊರಡುವ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ನಿಲ್ದಾಣಗಳನ್ನು ತಲುಪುವಂತೆ ದೆಹಲಿ ಪೊಲೀಸರು ಸಲಹೆ ನೀಡಿದ್ದಾರೆ.

ನವೆಂಬರ್ 10ರಂದು (ಸೋಮವಾರ) ಕೆಂಪುಕೋಟೆಯ ಬಳಿ ಬಿಳಿ ಬಣ್ಣದ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿ 13 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ADVERTISEMENT

ಘಟನೆಯ ಬೆನ್ನಲ್ಲೇ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿರುವುದರಿಂದ ಎಲ್ಲಾ ಪ್ರಯಾಣಿಕರು ರೈಲು, ಮೆಟ್ರೊ ಮತ್ತು ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿ ತಲುಪುವಂತೆ ಸೂಚಿಸಲಾಗಿದೆ ಎಂದು ದೆಹಲಿಯ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್ ಡುಂಬ್ರೆ ತಿಳಿಸಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಬರುವಂತೆ ಮತ್ತು ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವವರು ನಿಗದಿತ ಸಮಯಕ್ಕಿಂತ ಕನಿಷ್ಠ 20 ನಿಮಿಷಗಳ ಮೊದಲು ನಿಲ್ದಾಣಕ್ಕೆ ತಲುಪುವಂತೆ ಸೂಚಿಸಲಾಗಿದೆ ಎಂದು ಮಿಲಿಂದ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸುವವರು ಕನಿಷ್ಠ ಮೂರು ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪುವಂತೆ ಸಲಹೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ದೆಹಲಿಯ ರೈಲು ನಿಲ್ದಾಣ, ಮೆಟ್ರೊ ನಿಲ್ದಾಣ ಸೇರಿದಂತೆ ವಿಮಾನ ನಿಲ್ದಾಣದ ಸುತ್ತಮುತ್ತ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿರುವುದರ ನಡುವೆಯೂ ಭದ್ರತಾ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕೊನೆಯ ಕ್ಷಣದ ಅನಾನುಕೂಲತೆಯನ್ನು ತಪ್ಪಿಸುವ ಸಲುವಾಗಿ ಪ್ರಯಾಣಿಕರಿಗೆ ಸಲಹೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುರಕ್ಷತೆ ಮತ್ತು ಪ್ರಯಾಣಿಕರ ಸುಗಮ ಪ್ರಯಾಣ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.