ADVERTISEMENT

ಅತ್ಯಾಚಾರ ಪ್ರಕರಣ| ರಾಜಸ್ಥಾನ ಸಚಿವರ ಪುತ್ರನ ಬಂಧಿಸಲು ಜೈಪುರಕ್ಕೆ ದೆಹಲಿ ಪೊಲೀಸರು

ಪಿಟಿಐ
Published 15 ಮೇ 2022, 12:41 IST
Last Updated 15 ಮೇ 2022, 12:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ/ ನವದೆಹಲಿ: ಯುವತಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ರಾಜಸ್ಥಾನದ ಆರೋಗ್ಯ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿಯನ್ನು ಬಂಧಿಸಲು ದೆಹಲಿ ಪೊಲೀಸ್ ಅಧಿಕಾರಿಗಳು ಭಾನುವಾರ ಜೈಪುರ ತಲುಪಿದ್ದಾರೆ.

ಇದನ್ನು ರಾಜಸ್ಥಾನ ಪೊಲೀಸರು ಖಚಿತಪಡಿಸಿದ್ದು,‘ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಜೈಪುರ ಪೊಲೀಸ್‌ ಆಯುಕ್ತ ಆನಂದ್‌ ಶ್ರೀವಾಸ್ತವ ತಿಳಿಸಿದ್ದಾರೆ.

ದೆಹಲಿ ಪೊಲೀಸರು ಜೈಪುರದ ಸೇನ್ ಕಾಲೋನಿಯಲ್ಲಿ ಸಚಿವ ಜೋಶಿ ಅವರನಿರ್ಮಾಣ ಹಂತದ ನಿವಾಸಕ್ಕೆ ಹೋಗಿ, ತಲೆಮರೆಸಿಕೊಂಡಿರುವ ಆರೋಪಿರೋಹಿತ್‌ ಮೇ 18ರಂದು ಮಧ್ಯಾಹ್ನ 1 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ಅಂಟಿಸಿದ್ದಾರೆ. ಸಚಿವರ ಅಧಿಕೃತ ನಿವಾಸಕ್ಕೆ ಪೊಲೀಸರು ಕಾಲಿಟ್ಟಿಲ್ಲ.

ADVERTISEMENT

‘ಸಚಿವರ ಪುತ್ರರೋಹಿತ್‌ ಒಂದು ವರ್ಷದಲ್ಲಿ ಅನೇಕ ಬಾರಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ’ ಎಂದು ಜೈಪುರದ 23 ವರ್ಷದ ಯುವತಿ ದೂರು ನೀಡಿದ್ದರು. ದೆಹಲಿಯಪಿಎಸ್ ಸದರ್ ಬಜಾರ್‌ ಠಾಣೆ ಪೊಲೀಸರು ‘ಜೀರೊ ಎಫ್‌ಐಆರ್‌’ (ಠಾಣಾ ವ್ಯಾಪ್ತಿಯ ಹೊರಗೆ ನಡೆದ ಪ್ರಕರಣ ವಿಳಂಬ ಮಾಡದೇ ಶೀಘ್ರ ಕ್ರಮಕ್ಕಾಗಿ ದಾಖಲಿಸುವ ಎಫ್‌ಐಆರ್‌) ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‘ಫೇಸ್‌ಬುಕ್‌ ಮೂಲಕ ಪರಿಚಿತರಾದ ರೋಹಿತ್‌, ಕೆಲಸದ ಸಂದರ್ಶನ ನೆಪದಲ್ಲಿ ದೆಹಲಿಗೆ ಕರೆಸಿಕೊಂಡು 2021ರ ಜನವರಿ 8ರಿಂದ ಇದೇ ವರ್ಷದ ಏಪ್ರಿಲ್‌ 17ರವರೆಗೆ ಅನೇಕ ಬಾರಿ ಅತ್ಯಾಚಾರ ಮಾಡಿದ್ದಾರೆ.ಮೊದಲ ಪತ್ನಿಗೆ ವಿಚ್ಛೇದನ ನೀಡಿ, ನನ್ನನ್ನು ವಿವಾಹವಾಗುವುದಾಗಿ ನಂಬಿಸಿದ್ದರು. ಅಲ್ಲದೇ ನನ್ನ ನಗ್ನ ಚಿತ್ರಗಳು ಹಾಗೂ ವಿಡಿಯೊಗಳನ್ನು ಸಂಗ್ರಹಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದಾರೆ’ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.