ADVERTISEMENT

ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ದೆಹಲಿ ಪೊಲೀಸರ ಲುಕ್ ಔಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 10 ಮೇ 2021, 11:14 IST
Last Updated 10 ಮೇ 2021, 11:14 IST
ಸುಶೀಲ್ ಕುಮಾರ್
ಸುಶೀಲ್ ಕುಮಾರ್   

ನವದೆಹಲಿ: ಲಂಡನ್ ಮತ್ತು ಬೀಜಿಂಗ್ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿರುವ ಸುಶೀಲ್ ಕುಮಾರ್ ವಿರುದ್ಧ ಕೊಲೆ ಪ್ರಕರಣವೊಂದರಲ್ಲಿ ದೆಹಲಿ ಪೊಲೀಸರು ಲುಕ್ ಔಟ್ ನೊಟೀಸ್ ಪ್ರಕಟಿಸಿದ್ದಾರೆ.

ಕಳೆದ ಮಂಗಳವಾರ ಛತ್ರಾಸಲ್ ಕ್ರೀಡಾಂಗಣದಲ್ಲಿ ಮತ್ತೊಬ್ಬ ಕುಸ್ತಿಪಟುವಿಗೆ ತೀವ್ರವಾದ ಹಲ್ಲೆ ನಡೆಸಿರುವ ಆರೋಪದ ಮೇಲೆ ಸುಶೀಲ್ ಕುಮಾರ್ ಮತ್ತು ಸಹಚರರನ್ನು ಪೊಲೀಸರು ಹುಡುಕುತ್ತಿದ್ದಾರೆ.

ಕುಸ್ತಿಪಟುಗಳಾದ ಸಾಗರ್ ಧನಕಡ್ ಮತ್ತು ಅವರ ಸ್ನೇಹಿತರಾದ ಸೋನು ಹಾಗೂ ಅಮಿತ್ ಕುಮಾರ್ ಮೇಲೆ ಸುಶೀಲ್ ಕುಮಾರ್ ಸೇರಿದಂತೆ ಹಲವರು ಹಲ್ಲೆ ಮಾಡಿದ್ದಾರೆ. ಈ ಕುರಿತು ವಿಡಿಯೊ ದಾಖಲೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಹಲ್ಲೆ ನಡೆದ ಮಾರನೆಯ ದಿನ ತೀವ್ರವಾದ ಗಾಯಗಳ ಕಾರಣಗಳಿಂದ ಸಾಗರ್ ಸಾವಿಗೀಡಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸೋನು, ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಸುಶೀಲ್ ಕುಮಾರ್ ಮತ್ತು ಸಹಚರರನ್ನು ಆರೋಪಿಸಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹರಿಯಾಣ, ಉತ್ತರಾಖಂಡ ಹಾಗೂ ದೆಹಲಿಯಲ್ಲಿ ಹುಡುಕಾಟ ನಡೆಸಿದ್ದಾರೆ.

ಸುಶೀಲ್ ಕುಮಾರ್‌ಗೆ ಸೇರಿದ ವಿವಾದಿತ ಫ್ಲ್ಯಾಟ್‌ಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತ ಸಾಗರ್, ದೆಹಲಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಒಬ್ಬರ ಮಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.