ADVERTISEMENT

ದೆಹಲಿ ಕಾಲ್ತುಳಿತ ಪ್ರಕರಣ: ಅಧಿಕ ಟಿಕೆಟ್ ಮಾರಿದ್ದೇಕೆ: ರೈಲ್ವೆಗೆ HC ಪ್ರಶ್ನೆ

ಏಜೆನ್ಸೀಸ್
Published 19 ಫೆಬ್ರುವರಿ 2025, 12:23 IST
Last Updated 19 ಫೆಬ್ರುವರಿ 2025, 12:23 IST
<div class="paragraphs"><p>ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ</p></div>

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ

   

(ಪಿಟಿಐ ಚಿತ್ರ)

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ ವಾರ 18 ಜನರ ಸಾವಿಗೆ ಕಾರಣವಾಗಿದ್ದ ಕಾಲ್ತುಳಿತ ಪ್ರಕರಣದಲ್ಲಿ ಪ್ರಯಾಗ್‌ರಾಜ್‌ಗೆ ಹೊರಟಿದ್ದ ರೈಲುಗಳ ಸಾಮರ್ಥ್ಯ ಮೀರಿ ಹೆಚ್ಚುವರಿ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದೇಕೆ ಎಂದು ರೈಲ್ವೆ ಇಲಾಖೆಯನ್ನು ದೆಹಲಿ ಹೈಕೋರ್ಟ್‌ ಪ್ರಶ್ನಿಸಿದೆ.

ADVERTISEMENT

ಪ್ರಕರಣ ಕುರಿತು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಡಿ.ಕೆ. ಉಪಾಧ್ಯಾಯ ಮತ್ತು ನ್ಯಾ. ತುಷಾರ್ ರಾವ್ ಗೆಡಾಲೆ ಅವರಿದ್ದ ವಿಭಾಗೀಯ ಪೀಠವು, ಕೇಂದ್ರ ಹಾಗೂ ರೈಲ್ವೆ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ರೈಲ್ವೆ ಕಾಯ್ದೆಯ ಪ್ರಕಾರ ಪ್ರತಿ ಕೋಚ್‌ಗೆ ಪ್ರಯಾಣಿಕರ ಸಂಖ್ಯೆಯನ್ನು ನಿರ್ದಿಷ್ಟ ಸಂಖ್ಯೆಗೆ ನಿರ್ಬಂಧಿಸಬೇಕಿದೆ. ಒಂದೊಮ್ಮೆ ಈ ಕಾಯ್ದೆಯ ಉಲ್ಲಂಘನೆಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಜತೆಗೆ ₹1 ಸಾವಿರ ದಂಡ ವಿಧಿಸಲೂಬಹುದು. ಈ ಕಾಯ್ದೆಯಡಿ ಪ್ರಯಾಣಿಕರ ಸಂಖ್ಯೆ ನಿರ್ಬಂಧಿಸಲು ರೈಲ್ವೆ ಇಲಾಖೆ ಕೈಗೊಂಡ ಕ್ರಮಗಳೇನು? ನಿಯಮ ಮೀರಿ ಒಳಬಂದವರ ವಿರುದ್ಧ ದಂಡ ವಿಧಿಸಲಾಗಿದೆಯೇ? ಪ್ರತಿ ಕೋಚ್‌ಗೆ ಗರಿಷ್ಠ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಲಾಗಿದೆಯೇ? ಎಂದು ಹೈಕೋರ್ಟ್ ಸಾಲುಸಾಲು ಪ್ರಶ್ನೆಗಳನ್ನು ಕೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ರೈಲ್ವೆ ಇಲಾಖೆ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಈ ದುರ್ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದಲೂ ರೈಲ್ವೆ ಇಲಾಖೆ ಪ್ರಕರಣವನ್ನು ಅವಲೋಕಿಸುತ್ತಿದೆ’ ಎಂದರು.

ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 26ರಂದು ನಡೆಯಲಿದೆ ಎಂದು ಕೋರ್ಟ್ ಹೇಳಿತು.

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಫೆ. 15ರಂದು ಸಂಭವಿಸಿದ ಕಾಲ್ತುಳಿತದಲ್ಲಿ 11 ಮಹಿಳೆಯರು ಹಾಗೂ ಐವರು ಮಕ್ಕಳನ್ನು ಒಳಗೊಂಡು ಒಟ್ಟು 18 ಜನರು ಮೃತಪಟ್ಟಿದ್ದರು. ಇದಕ್ಕೆ ಹಲವು ಕಾರಣಗಳಿದ್ದರೂ, ಸ್ಥಳಾವಕಾಶ ಮೀರಿ ಟಿಕೆಟ್ ಮಾರಾಟ ಮಾಡಿದ್ದೇ ಪ್ರಮುಖ ಕಾರಣವಾಗಿದ್ದು ಎರಡು ಗಂಟೆಯಲ್ಲಿ ಮೂರು ಸಾವಿರ ಟಿಕೆಟ್ ಮಾರಾಟವಾಗಿದೆ ಎಂದು ವರದಿಯಾಗಿದೆ.

ರಾತ್ರಿ 10ಕ್ಕೆ ಪ್ರಯಾಗ್‌ರಾಜ್ ಮೂಲಕ ಹೊರಡುವ ಶಿವಗಂಗಾ ಮತ್ತು ಮಗಧ ಎಕ್ಸ್‌ಪ್ರೆಸ್‌ ರೈಲುಗಳ ಮೂಲಕ ಪ್ರಯಾಣಿಸಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.