ADVERTISEMENT

ಬ್ರಿಟನ್ ನಾಗರಿಕರು ಲಸಿಕೆ ಪಡೆದಿದ್ದರೂ 10 ದಿನ ಕ್ವಾರಂಟೈನ್‌: ಭಾರತದ ಪ್ರತೀಕಾರ

ಅನಿರ್ಬನ್ ಭೌಮಿಕ್
Published 1 ಅಕ್ಟೋಬರ್ 2021, 17:25 IST
Last Updated 1 ಅಕ್ಟೋಬರ್ 2021, 17:25 IST
   

ನವದೆಹಲಿ: ಬ್ರಿಟಿಷ್ ಸರ್ಕಾರದ 'ತಾರತಮ್ಯ' ಪ್ರಯಾಣದ ನಿಯಮಗಳ ವಿರುದ್ಧ ಭಾರತವು ಪ್ರತೀಕಾರ ತೀರಿಸಿಕೊಂಡಿದೆ. ಸೋಮವಾರದಿಂದ ದೇಶಕ್ಕೆ ಆಗಮಿಸುವ ಬ್ರಿಟನ್ ನಾಗರಿಕರು ಕೋವಿಡ್ -19 ಲಸಿಕೆ ಪಡೆದಿದ್ದರೂ ಸಹ 10 ದಿನಗಳ ಕಾಲ ಕ್ವಾರಂಟೈನ್‌ ಕಡ್ಡಾಯಗೊಳಿಸಿದೆ.

ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರನ್ನು ಲಸಿಕೆ ಹಾಕಿಸಿಕೊಳ್ಳದವರೆಂದು ಪರಿಗಣಿಸುವ ಮೂಲಕ ಕ್ವಾರಂಟೈನ್ ವಿಧಿಸುತ್ತಿರುವ ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರತೀಕಾರಕ್ಕೆ ಭಾರತ ನಿರ್ಧರಿಸಿದೆ.

ಭಾರತ ಸರ್ಕಾರದ ಹೊಸ ಪ್ರಯಾಣದ ನಿಯಮಗಳ ಪ್ರಕಾರ, ಭಾರತಕ್ಕೆ ಪ್ರಯಾಣಿಸುವ ಬ್ರಿಟನ್ ಪ್ರಯಾಣಿಕರು ಲಸಿಕೆ ಪಡೆದಿದ್ದರೂ ಸಹ 72 ಗಂಟೆಗಳ ಮುಂಚೆಮಾಡಿಸಿಕೊಂಡ ಕೋವಿಡ್ -19 ಆರ್‌ಟಿ-ಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ತರಬೇಕು. ಯಾವುದೇ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ ಮತ್ತು ತಲುಪಿದ ಎಂಟು ದಿನಗಳ ಬಳಿಕ ಮತ್ತೆ ಕೋವಿಡ್ -19 ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇದಕ್ಕಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವು ಸೋಮವಾರದಿಂದ ಭಾರತಕ್ಕೆ ಆಗಮಿಸುವ ಯುಕೆ ನಾಗರಿಕರಿಗೆ ಹೊಸ ಕ್ರಮಗಳ ಅನುಷ್ಠಾನಕ್ಕೆ ವ್ಯವಸ್ಥೆ ಮಾಡುತ್ತಿದೆ.

ಕೋವಿಶೀಲ್ಡ್ ಕೋವಿಡ್ -19 ಲಸಿಕೆ ಹಾಕಿಸಿಕೊಂಡ ಜನರಿಗೆ ಕೊವಿನ್ ಆಪ್ ಮೂಲಕ ನೀಡಲಾದ ಪ್ರಮಾಣಪತ್ರಗಳ ಕೆಲವು ಅಂಶಗಳ ಕುರಿತು ಬ್ರಿಟಿಷ್ ಸರ್ಕಾರದ ಕಳವಳವನ್ನು ಪರಿಹರಿಸಲು ಎರಡು ಸರ್ಕಾರಗಳ ರಾಜತಾಂತ್ರಿಕರು ಮತ್ತು ಆರೋಗ್ಯ ಅಧಿಕಾರಿಗಳು ಕಳೆದ ಎರಡು ವಾರಗಳಿಂದ ಸಂಪರ್ಕದಲ್ಲಿದ್ದಾರೆ. ಲಸಿಕೆ ಹಾಕಿದ ಫಲಾನುಭವಿಗಳ ಹುಟ್ಟಿದ ದಿನಾಂಕ ಪೂರ್ಣವಾಗಿ ತೋರಿಸುವಂತೆ ಅಪ್‌ಡೇಟ್ ಮಾಡಿದ ಭಾರತ ಸರ್ಕಾರವು ಲಂಡನ್‌ನ ಒಂದು ಕಳವಳವನ್ನು ಪರಿಹರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.