ADVERTISEMENT

ದೆಹಲಿ ಗಲಭೆ: ಪೊಲೀಸರಿಗೆ ಪಿಸ್ತೂಲ್‌ ತೋರಿಸಿದ್ದ ವ್ಯಕ್ತಿಗೆ ಅದ್ದೂರಿ ಸ್ವಾಗತ

ಅನಾರೋಗ್ಯ ಪೀಡಿತ ತಂದೆ ನೋಡಲು ಪರೋಲ್‌ ಮೇಲೆ ಬಿಡುಗಡೆ

ಪಿಟಿಐ
Published 27 ಮೇ 2022, 10:54 IST
Last Updated 27 ಮೇ 2022, 10:54 IST
ಶಾರುಖ್‌ ಪಠಾಣ್‌
ಶಾರುಖ್‌ ಪಠಾಣ್‌   

ನವದೆಹಲಿ: ಈಶಾನ್ಯ ದೆಹಲಿ ಕೋಮು ಗಲಭೆ ವೇಳೆ ಪೊಲೀಸ್‌ ಹಣೆಗೆ ಪಿಸ್ತೂಲ್‌ ಹಿಡಿದು ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಜೈಲು ಸೇರಿ, ಪೆರೋಲ್‌ ಮೇಲೆ ಹೊರಬಂದ ಶಾರುಖ್‌ ಪಠಾಣ್‌ಗೆ ಅದ್ದೂರಿ ಸ್ವಾಗತ ಕೋರಿರುವ ವಿಡಿಯೋ ವೈರಲ್‌ ಆಗಿದೆ.

ಪಠಾಣ್‌, ಭದ್ರತಾ ಸಿಬ್ಬಂದಿಯ ಸಮ್ಮುಖದಲ್ಲಿ ಬೆಂಬಲಿಗರೊಂದಿಗೆ ಸಂಭ್ರಮದಲ್ಲಿರುವ ದೃಶ್ಯ ವಿಡಿಯೋದಲ್ಲಿದೆ. ‘ನ್ಯಾಯಾಲಯದ ಆದೇಶದ ಮೇರೆಗೆ ಪಠಾಣ್‌ನನ್ನು ನಾಲ್ಕು ಗಂಟೆಗಳ ಕಾಲ ಪರೋಲ್‌ ಮೇಲೆ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿತ್ತು‘ ಎಂದು ಹಿರಿಯ ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಅವರು ಈ ವಿಡಿಯೋವನ್ನು ಟ್ವೀಟ್‌ ಮಾಡಿ, ‘ಪೊಲೀಸ್‌ ಹಣೆಗೆ ಪಿಸ್ತೂಲ್‌ ಹಿಡಿದು ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಹೀರೋ ಎಂಬಂತೆ ಬಿಂಬಿಸಲಾಗುತ್ತಿದೆ. ದೆಹಲಿಯ ಹಲವು ಪ್ರದೇಶಗಳು ಪಾಕಿಸ್ತಾನದಂತೆ ಆಗುತ್ತಿವೆ. ಇದು ದೆಹಲಿ ಮತ್ತು ದೇಶ ವಿರೋಧಿ ಮನಸ್ಥಿತಿ‘ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ADVERTISEMENT

2020ರ ಫೆಬ್ರುವರಿ 23 ರಂದು ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಗಲಭೆ ವೇಳೆ ಪಠಾಣ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಹಣೆಗೆ ಪಿಸ್ತೂಲ್‌ ಹಿಡಿದು ಬೆದರಿಕೆಯೊಡ್ಡಿದ್ದ. ಈ ಫೋಟೊ ವೈರಲ್‌ ಆಗಿತ್ತು. ಗಲಭೆಯಲ್ಲಿ 42 ಮಂದಿ ಮೃತಪಟ್ಟು, ಸುಮಾರು 200 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.