ADVERTISEMENT

ಕುಟುಂಬ ಭೇಟಿಗೆ ಕೋರಿ ಉಮರ್ ಸಲ್ಲಿಸಿದ್ದ ಅರ್ಜಿ ವಜಾ

ಪಿಟಿಐ
Published 21 ಸೆಪ್ಟೆಂಬರ್ 2020, 11:30 IST
Last Updated 21 ಸೆಪ್ಟೆಂಬರ್ 2020, 11:30 IST
ಉಮರ್ ಖಾಲೀದ್
ಉಮರ್ ಖಾಲೀದ್   

ನವದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿರುವ ಜೆಎನ್‌ಯು ಹ‌ಳೆಯ ವಿದ್ಯಾರ್ಥಿ ‌ಉಮರ್ ಖಾಲಿದ್, ತಮ್ಮ ಕುಟುಂಬ ಭೇಟಿಗಾಗಿ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.

ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಅವರು, ಉಮರ್‌ನ ಅರ್ಜಿಯನ್ನು ಸೆ.19ರಂದು ವಜಾಗೊಳಿಸಿದ್ದಾರೆ.

ಉಮರ್ ಸೆ.24ರ ತನಕ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸೆ. 13ರಂದು ಉಮರ್‌ನನ್ನು ಬಂಧಿಸಲಾಗಿದ್ದು, ಮರುದಿನವೇ ನ್ಯಾಯಾಲಯವು ಪೊಲೀಸರ ವಶದಲ್ಲಿದ್ದ ಉಮರ್‌ನನ್ನು ವಿಚಾರಣೆಗೊಳಪಡಿಸಲು ಅನುಮತಿ ನೀಡಿತ್ತು. 11 ಲಕ್ಷ ಪುಟಗಳಲ್ಲಿರುವ ದಾಖಲೆಗಳೊಂದಿಗೆ ಆತನನ್ನು ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದರು.

ADVERTISEMENT

‘ಕಸ್ಟಡಿಗೆ ತೆಗೆದುಕೊಳ್ಳುವಾಗ ಪೊಲೀಸರು ನನ್ನ ಕುಟುಂಬದ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಮೌಖಿಕವಾಗಿ ಭರವಸೆ ನೀಡಿದ್ದರು. ಆದರೆ, ಈಗ ಅವರು ಭೇಟಿಗೆ ಅವಕಾಶ ನೀಡುತ್ತಿಲ್ಲ’ ಎಂದು ಉಮರ್, ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.

‘ಪೊಲೀಸ್ ಕಸ್ಟಡಿಯ ಅವಧಿ ದೀರ್ಘವಾಗಿರುವುದರಿಂದ ಪ್ರತಿದಿನ 30 ನಿಮಿಷಗಳ ಕಾಲ ಉಮರ್ ತನ್ನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ನೀಡಬೇಕು’ ಎಂದೂ ಅರ್ಜಿಯಲ್ಲಿ ವಕೀಲರು ಕೋರಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖಾಧಿಕಾರಿಯು, ‘ನ್ಯಾಯಾಲಯದ ನಿರ್ದೇಶನದಂತೆ ಈಗಾಗಲೇ ಉಮರ್‌ಗೆ ಪ್ರತಿನಿತ್ಯ ತಮ್ಮ ವಕೀಲರೊಂದಿಗೆ ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಕೀಲರ ಮೂಲಕ ಉಮರ್ ತಮ್ಮ ಕುಟುಂಬದ ಸದಸ್ಯರಿಗೆ ಸಂದೇಶವನ್ನು ನೀಡಬಹುದು’ ಎಂದೂ ತನಿಖಾಧಿಕಾರಿ ಹೇಳಿದ್ದಾರೆ.

‘ಉಮರ್, ಕುಟುಂಬದ ಸದಸ್ಯರನ್ನು ಭೇಟಿ ಮಾಡಿದಲ್ಲಿ ತಮ್ಮ ದೀರ್ಘಕಾಲೀನ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಇಲ್ಲವೇ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.