ಸಿಸೋಡಿಯಾ
ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಾಣ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಸರ್ಕಾರಿ ಕಡತಗಳನ್ನು ಮತ್ತು ಕಾರ್ಮಿಕರ ಹೆಸರಿನಲ್ಲಿ ಮಾಡಲಾಗಿದ್ದ ನಕಲಿ ಖಾತೆಗಳ 300ಕ್ಕೂ ಅಧಿಕ ಪಾಸ್‌ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿನಿರ್ದೇಶನಾಲಯ (ಇ.ಡಿ) ಶುಕ್ರವಾರ ತಿಳಿಸಿದೆ.
ಈ ಬೆನ್ನಲೇ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಶುಕ್ರವಾರ ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.
ಎಎಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಹೆಸರಿನಲ್ಲಿ 322 ಖಾತೆಗಳನ್ನು ತೆರೆದು, ಯೋಜನೆಯ ಹಣವನ್ನು ಅದಕ್ಕೆ ವರ್ಗಾಯಿಸಲಾಗಿದೆ ಎಂದು ಇ.ಡಿ ಆರೋಪಿಸಿದೆ. ಪ್ರಕರಣ ಸಂಬಂಧ ಇ.ಡಿಯು ಜೂನ್ 18ರಂದು ದೆಹಲಿಯ 37 ಸ್ಥಳಗಳಲ್ಲಿ ಶೋಧ ನಡೆಸಿತ್ತು.
ಕೊಠಡಿ ನಿರ್ಮಾಣ ಕಾಮಗಾರಿಯಲ್ಲಿ ₹2000 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳವು ಎಎಪಿ ಸರ್ಕಾರದಲ್ಲಿ ಸಚಿವರಾಗಿದ್ದ ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಸೇರಿದಂತೆ ಹಲವರ ವಿರುದ್ಧ ಏ.30ರಂದು ಪ್ರಕರಣ ದಾಖಲಿಸಿಕೊಂಡಿತ್ತು. ಇದರ ಆಧಾರದಲ್ಲಿ ಇ.ಡಿಯು ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ತನಿಖೆ ನಡೆಸುತ್ತಿದೆ.
ಖಾಸಗಿ ಗುತ್ತಿಗೆದಾರನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಮಹತ್ವದ ದಾಖಲೆಗಳು ಪತ್ತೆಯಾಗಿದೆ. ಸರ್ಕಾರಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ ಮಾಹಿತಿ ನೀಡಿದೆ.
ನಕಲಿ ದಾಖಲೆ ಮತ್ತು ಬಿಲ್ ಸೃಷ್ಟಿಸಲು ಬಳಸಿದ್ದ ಖಾಸಗಿ ಗುತ್ತಿಗೆದಾರರು ಮತ್ತು ಶೆಲ್ ಸಂಸ್ಥೆಗಳ ನಕಲಿ ಲೆಟರ್‌ಹೆಡ್‌ಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಇ.ಡಿ ಹೇಳಿದೆ.
ಸಿಸೋಡಿಯಾ ವಿಚಾರಣೆ: ದೆಹಲಿಯ ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಾಣ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಶುಕ್ರವಾರ ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.
ಪ್ರಕರಣ ಸಂಬಂಧ ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದ್ರ ಜೈನ್‌ಗೆ ಎಸಿಬಿ ಸಮನ್ಸ್ ಜಾರಿಗೊಳಿಸಿತ್ತು. ಜೈನ್ ಅವರು ಜೂನ್ 6ರಂದು ವಿಚಾರಣೆಗೆ ಹಾಜರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.