ನವದೆಹಲಿ: ದೆಹಲಿಯಲ್ಲಿ ವಾಸವಿರುವ 50 ಸಾವಿರ ಕೊಳೆಗೇರಿ ನಿವಾಸಿಗಳಿಗೆ ವಸತಿ ಸಮುಚ್ಚಯಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶನಿವಾರ ತಿಳಿಸಿದ್ದಾರೆ.
ದೆಹಲಿಯ ವಾಯುವ್ಯ ಭಾಗದಲ್ಲಿರುವ ಸುಲ್ತಾನ್‌ಪುರಿ ಬಳಿ 2011ರ ಸುಮಾರಿಗೆ ಆರ್ಥಿಕವಾಗಿ ಹಿಂದುಳಿದವರಿಗಾಗಿ ಸರ್ಕಾರದ ವತಿಯಿಂದ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳನ್ನು ಯಾರಿಗೂ ನೀಡಿರದ ಕಾರಣ, ದುರಸ್ತಿಪಡಿಸಿ ಅಲ್ಲಿಗೆ ಕೊಳೆಗೇರಿ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ವಸತಿ ಸಮುಚ್ಚಯ ನಿರ್ಮಾಣವಾಗಿ ಇಷ್ಟು ವರ್ಷಗಳದರೂ ಕೂಡ ಕೊಳೆಗೇರಿ ನಿವಾಸಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡದೇ ಇರುವುದಕ್ಕೆ ದೆಹಲಿಯ ಹಿಂದಿನ ಸರ್ಕಾರಗಳನ್ನು ರೇಖಾ ಗುಪ್ತಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಂದಿನ ಕಾಂಗ್ರೆಸ್ ಹಾಗೂ ಎಎಪಿ ಸರ್ಕಾರಗಳು ಬಡವರಿಗೆ ವಸತಿ ಕಲ್ಪಿಸಲು ವಿಫಲವಾಗಿವೆ. ನಮ್ಮ ಸರ್ಕಾರವು ಕೊಳೆಗೇರಿ ನಿವಾಸಿಗಳಿಗೆ ಹೊಸ ವಸತಿ ದೊರೆಯುವಂತೆ ಮಾಡುತ್ತದೆ. 2011ರಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯಗಳನ್ನು ದುರಸ್ತಿಪಡಿಸಲಾಗುತ್ತಿದೆ. ದುರಸ್ತಿಪಡಿಸಲಾಗದ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸಿ ಬಡವರಿಗೆ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆದರೆ, ದೆಹಲಿಯಲ್ಲಿರುವ ಯಾವುದೇ ಕೊಳೆಗೇರಿಗಳನ್ನು ನಾಶಪಡಿಸಲಾಗುವುದಿಲ್ಲ. ಕೊಳೆಗೇರಿ ನಿವಾಸಿಗಳ ಹಕ್ಕುಗಳನ್ನು ಕಾಪಾಡಲು ನಾವು ಬದ್ಧರಿದ್ದೇವೆ ಎಂದು ಹೇಳಿದ್ದಾರೆ.
ಬಡವರಿಗೆ ಪ್ರತ್ಯೇಕ ವಸತಿ ಸಿಗದೇ ಕೊಳೆಗೇರಿಗಳನ್ನು ನಾಶಪಡಿಸುವಂತಿಲ್ಲ ಎಂದು ಸರ್ಕಾರಿ ಅಧಿಕಾರಿಗಳಿಗೆ ರೇಖಾ ಗುಪ್ತಾ ಅವರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.