ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳ ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿ ಎಂದು ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಬೀದಿ ನಾಯಿಗಳ ಸ್ಥಳಾಂತರಿಸುವ ವಿಚಾರವಾಗಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ದೆಹಲಿ–ಎನ್‌ಸಿಆರ್‌ನಲ್ಲಿ ದಶಕಗಳಿಂದ ಚಾಲ್ತಿಯಲ್ಲಿದ್ದ ಮಾನವೀಯ ಹಾಗೂ ವಿಜ್ಞಾನ ಆಧಾರಿತ ನೀತಿಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನ ತೆಗೆದುಹಾಕಿದೆ’ ಎಂದು ಹೇಳಿದ್ದಾರೆ.
‘ಈ ಧ್ವನಿ ಇಲ್ಲದ ಇಂಥ ನೀತಿಗಳನ್ನು ಅಳಸಿಹಾಕಿದರೂ ಸಮಸ್ಯೆ ಇಲ್ಲ. ಆಶ್ರಯ, ಸಂತಾನ ಹರಣ, ಲಸಿಕೆ ಮತ್ತು ಸಮುದಾಯ ಆರೈಕೆಯಿಂದ ಕ್ರೌರ್ಯವಿಲ್ಲದೆ ಬೀದಿ ನಾಯಿಗಳನ್ನು ಸುರಕ್ಷಿತವಾಗಿಡಲು ಸಾಧ್ಯ’ ಎಂದು ಅವರು ತಿಳಿಸಿದ್ದಾರೆ.
‘ಯಾವುದೇ ರಕ್ಷಣೆಯನ್ನು ತೆಗೆದುಹಾಕುವುದು ಕ್ರೌರ್ಯ. ದೂರದೃಷ್ಟಿ ಹಾಗೂ ಸಹಾನುಭೂತಿ ಇಲ್ಲದ ಕಾನೂನನ್ನು ಸುಪ್ರೀಂ ಕೋರ್ಟ್ ಪಕ್ಕಕ್ಕೆ ಸರಿಸಿದೆ. ಸಾರ್ವಜನಿಕರ ಹಿತ ಮತ್ತು ಪ್ರಾಣಿಗಳ ಕಾಳಜಿ ಎರಡೂ ಜತೆಜತೆಯಾಗಿ ಸಾಗಬೇಕು’ ಎಂದೂ ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್.ಮಹಾದೇವನ್ ಅವರ ನೇತೃತ್ವದ ನ್ಯಾಯಪೀಠವು ಬೀದಿ ನಾಯಿಗಳ ಸ್ಥಳಾಂತರಿಸುವಿಕೆ ಬಗ್ಗೆ ಅಧಿಕಾರಿಗಳಿಗೆ ಸೋಮವಾರ ಕೆಲವು ಸೂಚನೆಗಳನ್ನು ನೀಡಿತ್ತು.
ನ್ಯಾಯಾಲಯದ ಆದೇಶ ಪಾಲನೆ ಕಾರ್ಯಕ್ಕೆ ಅಡ್ಡಿ ಉಂಟುಮಾಡುವ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿಯೂ ತಿಳಿಸಿತ್ತು.
ಪ್ರಾಣಿ ಸಂರಕ್ಷಣೆ ಕಾರ್ಯಕರ್ತರು ಮತ್ತು ‘ಪ್ರಾಣಿ ಪ್ರೇಮಿಗಳು’ ಎಂದು ಕರೆಸಿಕೊಳ್ಳುವವರಿಗೆ ರೇಬಿಸ್‌ಗೆ ಬಲಿಯಾದ ಮಕ್ಕಳನ್ನು ಮರಳಿ ತಂದುಕೊಡಲು ಸಾಧ್ಯವೇ ಎಂದು ನ್ಯಾಯಪೀಠ ಪ್ರಶ್ನಿಸಿತ್ತು.
ನಾಯಿಗಳ ಸೆರೆ ಹಿಡಿಯುವ ಕಾರ್ಯವನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬುದು ಅಧಿಕಾರಿಗಳಿಗೆ ಬಿಟ್ಟಿದ್ದು. ನಗರ ಮತ್ತು ನಗರದ ಹೊರವ ಲಯವನ್ನು ಬೀದಿ ನಾಯಿಗಳಿಂದ ಮುಕ್ತ ಗೊಳಿಸುವುದು ಮೊತ್ತಮೊದಲ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಆರು ವಾರಗಳ ಬಳಿಕ ಮತ್ತೆ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿತ್ತು. ಬೀದಿ ನಾಯಿ ಹಾವಳಿಯಿಂದ ರಾಷ್ಟ್ರ ರಾಜಧಾನಿಯಲ್ಲಿ ರೇಬಿಸ್ ಹೆಚ್ಚಾಗಿರುವ ಕಾರಣ ಜುಲೈ 28ರಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.