ADVERTISEMENT

ದೆಹಲಿ: ಫೆ.8ಕ್ಕೆ ಚುನಾವಣೆ

ಫೆ.11ರಂದು ಫಲಿತಾಂಶ; ರಾಷ್ಟ್ರರಾಜಧಾನಿಯಲ್ಲಿ ಗರಿಗೆದರಿದ ಚಟುವಟಿಕೆ; ನೀತಿ ಸಂಹಿತೆ ಜಾರಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 15:55 IST
Last Updated 7 ಜನವರಿ 2020, 15:55 IST

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಫೆಬ್ರುವರಿ 8ರಂದು ಒಂದೇ ಹಂತದಲ್ಲಿ ನಡೆಯಲಿದ್ದು, 11ರಂದು ಮತ ಎಣಿಕೆ ನಡೆಯಲಿದೆ. 70 ಸದಸ್ಯ ಬಲದ ವಿಧಾನಸಭೆಯ ಅವಧಿ ಫೆಬ್ರುವರಿ 22ರಂದು ಕೊನೆಗೊಳ್ಳಲಿದೆ.

ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೊರಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಿದರು. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.

ಆಡಳಿತ ಚುಕ್ಕಾಣಿ ಹಿಡಿದಿರುವ ಆಮ್‌ ಅದ್ಮಿ ಪಕ್ಷ (ಎಎಪಿ) ಮರಳಿ ಅಧಿಕಾರಕ್ಕೆ ಬರುವುದೇ ಅಥವಾ 1998 ರಿಂದ ಅಧಿಕಾರ ಪಡೆಯಲು ವಿಫಲವಾಗಿರುವ ಬಿಜೆಪಿ ಈ ಬಾರಿ ಯಶಸ್ಸು ಕಾಣುವುದೇ ಎಂಬ ಕುತೂಹಲಕ್ಕೆ ಫೆ. 11ರಂದು ತೆರೆಬೀಳಲಿದೆ. 2013ರವರೆಗೆ ಸತತ 15 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌, ನಂತರದ ಚುನಾವಣೆಗಳಲ್ಲಿ ನೀರಸ ಪ್ರದರ್ಶನ ನೀಡಿದೆ.

ADVERTISEMENT

ಸದ್ಯದ ಮತಪಟ್ಟಿ ಪ್ರಕಾರ, ಸುಮಾರು 1.46 ಕೋಟಿ ಜನರು ಹಕ್ಕು ಚಲಾಯಿಸಲಿದ್ದಾರೆ. ಎಎಪಿ 2013ರಲ್ಲಿ 49 ದಿನ ಅಧಿಕಾರದಲ್ಲಿತ್ತು. 2015ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಆಗ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ 67 ಸ್ಥಾನಗಳಿಸಿದ್ದರೆ, ಬಿಜೆಪಿ 3 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಕಾಂಗ್ರೆಸ್ ಪಕ್ಷದ್ದು ಶೂನ್ಯ ಸಾಧನೆ.

ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಈ ಮೂರೂ ಪಕ್ಷಗಳ ಸಾಧನೆ ಏರು
ಪೇರಾಗಿತ್ತು.ಕಾಂಗ್ರೆಸ್ ತನ್ನ ಮತಗಳಿಕೆ ಪ್ರಮಾಣ ವೃದ್ಧಿಸಿಕೊಂಡಿದ್ದು, ಲೋಕಸಭೆಯ ಏಳು ಕ್ಷೇತ್ರಗಳ ಪೈಕಿ ಐದರಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರೆ, ಎಎಪಿ ತೃತೀಯ ಸ್ಥಾನ ಪಡೆದಿತ್ತು.

ಆಮ್‌ ಅದ್ಮಿ ಪಕ್ಷವು (ಎಎಪಿ) ತನ್ನ ಸರ್ಕಾರದ ಐದು ವರ್ಷಗಳ ಸಾಧನೆಗಳನ್ನು ಪ್ರಸ್ತಾಪಿಸುವ ಮೂಲಕವೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ
–ಅರವಿಂದ ಕೇಜ್ರಿವಾಲ್, ಮುಖ್ಯಮಂತ್ರಿ

ಜನರನ್ನು ಒಮ್ಮೆ ಮರುಳು ಮಾಡಬಹುದು, ಪ್ರತಿ ಬಾರಿಯೂ ಅಲ್ಲ. ಐದು ವರ್ಷ ಟೊಳ್ಳು ಭರವಸೆ ನೀಡಿದ ಪಕ್ಷವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ.
–ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ವೇಳಾಪಟ್ಟಿ

ಅಧಿಸೂಚನೆ ಪ್ರಕಟಣೆ; ಜನವರಿ 14

ನಾಮಪತ್ರ ಸಲ್ಲಿಸಲು ಕೊನೆ ದಿನ; ಜನವರಿ 21

ನಾಮಪತ್ರಗಳ ಪರಿಶೀಲನೆ; ಜನವರಿ 22

ವಾಪಸಾತಿಗೆ ಅಂತಿಮ ದಿನ; ಜನವರಿ 24

ಮತದಾನ ; ಫೆಬ್ರುವರಿ 8

ಮತಎಣಿಕೆ; ಫೆಬ್ರುವರಿ 11

***

ವಿಧಾನಸಭೆಯ ಒಟ್ಟು ಸದಸ್ಯ ಬಲ;70

ಒಟ್ಟು ಮತಗಟ್ಟೆಗಳು;13,750

***

2015ರ ಚುನಾವಣಾ ಫಲಿತಾಂಶ

ಆಮ್‌ ಅದ್ಮಿ ಪಕ್ಷ;67

ಬಿಜೆಪಿ;03

ಕಾಂಗ್ರೆಸ್‌;00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.