
ನವದೆಹಲಿ: ಉತ್ತರ ದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿಯ ಖಾಸಗಿ ಅಂಗವನ್ನು ಕತ್ತರಿಸಿರುವ ಘಟನೆ ನಡೆದಿದೆ. ಆತ ಮತ್ತೊಬ್ಬ ಮಹಿಳೆ ಜೊತೆ ವಿವಾಹವಾಗಿದ್ದಾನೆ ಎಂಬ ಮಾಹಿತಿ ತಿಳಿದ ಬಳಿಕ ಕೋಪಗೊಂಡ ಆಕೆ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ನಿವಾಸಿ ವಿಸರ್ಜೀತ್ ಗಾಯಗೊಂಡಿರುವ ವ್ಯಕ್ತಿ, ಕಳೆದ ಎರಡು ವರ್ಷಗಳಿಂದ ವಜೀರಾಬಾದ್ ನಿವಾಸಿ ಅಮೀನಾ ಖಾಟೂನ್ ಜೊತೆ ಆತ ಸಹ ಜೀವನ ನಡೆಸುತ್ತಿದ್ದನು ಎಂದು ಅವರು ಹೇಳಿದ್ದಾರೆ.
ಫೆಬ್ರುವರಿ 25ರ ರಾತ್ರಿ ತೀವ್ರ ಗಾಯಗೊಂಡ ವ್ಯಕ್ತಿ ಹಿಂದೂ ರಾವ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ಪೊಲೀಸರು ಆಸ್ಪತ್ರೆಗೆ ತೆರಳಿ ಮಾಹಿತಿ ಸಂಗ್ರಹಿಸಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.
ಕಳೆದ ಎರಡು ವರ್ಷಗಳಿಂದ ಇಬ್ಬರೂ ಪರಸ್ಪರ ಪರಿಚಿತರಾಗಿದ್ದರು. ಪರಿಚಯ ಪ್ರೇಮಕ್ಕೆ ತಿರುಗಿ, ವಿಸರ್ಜೀತ್ ದೆಹಲಿಗೆ ಬಂದು ಅಮೀನಾ ಜೊತೆ ವಾಸವಿದ್ದನು ಎಂದು ತಿಳಿದುಬಂದಿದೆ.
25ರ ರಾತ್ರಿ ಅಮೀನಾ, ವಿಸರ್ಜೀತ್‌ಗೆ ಅಮಲೇರಿಸುವ ಔಷಧಿ ಬೆರೆಸಿದ್ದ ಹಾಲು ನೀಡಿದ್ದಳು. ಆತ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಮರ್ಮಾಂಗಕ್ಕೆ ಚಾಕು ಹಾಕಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಆತ ನೋವಿನಲ್ಲೇ ಕಷ್ಟಪಟ್ಟು ಹಿಂದೂ ರಾವ್ ಆಸ್ಪತ್ರೆಗೆ ತೆರಳಿದ್ದಾನೆ. ಬಳಿಕ, ಸಫ್ಥಾರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಗಿದ್ಲು, ಅಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಆತನ ಹೇಳಿಕೆ ಮತ್ತು ವೈದ್ಯಕೀಯ ವರದಿ ಆಧರಿಸಿ ಅಮೀನಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118(2) ಮತ್ತು ಸೆಕ್ಷನ್ 123 ಅಡಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.