ADVERTISEMENT

ದೆಹಲಿ: ಸೋಂಕಿತ ಪ್ರತಿವ್ಯಕ್ತಿಯಿಂದ ಇಬ್ಬರಿಗೆ ಸೋಂಕು ಪ್ರಸರಣ

‘ಆರ್‌–ವ್ಯಾಲ್ಯೂ’ 2.1 ದಾಖಲು: ಐಐಟಿ–ಮದ್ರಾಸ್‌ನಿಂದ ಅಧ್ಯಯನ

ಪಿಟಿಐ
Published 23 ಏಪ್ರಿಲ್ 2022, 11:02 IST
Last Updated 23 ಏಪ್ರಿಲ್ 2022, 11:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸೋಂಕಿತ ವ್ಯಕ್ತಿಯು ಎಷ್ಟು ಜನರಿಗೆ ಸೋಂಕು ಹರಡಿಸಬಲ್ಲ ಎಂದು ತಿಳಿಸುವ ‘ಆರ್‌–ವ್ಯಾಲ್ಯೂ’, ರಾಷ್ಟ್ರ ರಾಜಧಾನಿಯಲ್ಲಿ ಈ ವಾರ 2.1ರಷ್ಟು ದಾಖಲಾಗಿದೆ.

ಅಂದರೆ, ದೆಹಲಿಯಲ್ಲಿ ಸೋಂಕಿತ ಪ್ರತಿ ವ್ಯಕ್ತಿಯಿಂದ ಇಬ್ಬರಿಗೆ ಸೋಂಕು ತಗುಲುತ್ತಿದೆ ಎಂಬುದನ್ನು ಈ ‘ಆರ್‌–ವ್ಯಾಲ್ಯೂ’ ತೋರಿಸುತ್ತದೆ ಎಂದು ಐಐಟಿ ಮದ್ರಾಸ್‌ನ ತಜ್ಞರು ನಡೆಸಿರುವ ವಿಶ್ಲೇಷಣೆ ಹೇಳುತ್ತದೆ.

ಐಐಟಿ–ಮದ್ರಾಸ್‌ನ ಗಣಿತ ವಿಭಾಗದ ಪ್ರೊ.ನೀಲೇಶ್ ಎಸ್‌.ಉಪಾಧ್ಯೆ ಹಾಗೂ ಪ್ರೊ. ಎಸ್‌.ಸುಂದರ್‌ ನೇತೃತ್ವದ ತಜ್ಞರು ಈ ವಿಶ್ಲೇಷಣೆ ನಡೆಸಿದ್ದು, ಅಧ್ಯಯನದ ವಿವರಗಳನ್ನು ಪಿಟಿಐ ಸುದ್ದಿಸಂಸ್ಥೆಗೆ ಅವರು ಹಂಚಿಕೊಂಡಿದ್ದಾರೆ.

ADVERTISEMENT

ದೇಶದಲ್ಲಿ ಕೋವಿಡ್‌–19 ಪ್ರಸರಣಕ್ಕೆ ಸಂಬಂಧಿಸಿದ ‘ಆರ್‌–ವ್ಯಾಲ್ಯೂ’ 1.3ರಷ್ಟಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ‘ಆರ್‌–ವ್ಯಾಲ್ಯೂ’ 1ಕ್ಕಿಂತ ಕಡಿಮೆ ದಾಖಲಾದರೆ ಕೋವಿಡ್–19 ಪಿಡುಗು ಅಂತ್ಯಗೊಂಡಿದೆ ಎಂದು ಹೇಳಲಾಗುತ್ತದೆ.

‘ಆರ್‌–ವ್ಯಾಲ್ಯೂ 2.1ರಷ್ಟು ದಾಖಲಾಗಿರುವುದು ದೇಶದಲ್ಲಿ ಕೋವಿಡ್‌ನ ನಾಲ್ಕನೇ ಅಲೆ ಕಾಣಿಸಿಕೊಳ್ಳುವುದರ ಸೂಚನೆ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ. ಇದಕ್ಕೆ ಇನ್ನೂ ಸಮಯಬೇಕು’ ಎಂದು ಐಐಟಿ–ಮದ್ರಾಸ್‌ನ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್‌ ಝಾ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

‘ಈಗ ಲಭ್ಯವಿರುವ ಮಾಹಿತಿಯಂತೆ, ಒಬ್ಬ ಸೋಂಕಿತ ವ್ಯಕ್ತಿಯಿಂದ ಇಬ್ಬರಿಗೆ ಸೋಂಕು ಹರಡುತ್ತಿದೆ. ಆದರೆ, ಸೋಂಕಿತರು ಹೊಂದಿರುವ ರೋಗನಿರೋಧಕ ಶಕ್ತಿಯ ಅರಿವು ನಮಗಿಲ್ಲ. ಅಲ್ಲದೇ, ಮೂರನೇ ಅಲೆ ಸಂದರ್ಭದಲ್ಲಿ ಸೋಂಕಿಗೆ ಒಳಗಾದವರಿಗೇ ಈಗ ಮತ್ತೊಮ್ಮೆ ಸೋಂಕು ತಗುಲುತ್ತಿದೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಬೇಕಿದೆ’ ಎಂದು ಅವರು ಪ್ರತಿಕ್ರಿಯಿಸಿದರು.

ದೆಹಲಿಯಲ್ಲಿ ಸೋಂಕಿತರಿಂದ ಸಂಗ್ರಹಿಸಿರುವ ಮಾದರಿಗಳ ಪೈಕಿ ಹೆಚ್ಚಿನವರಲ್ಲಿ ಓಮೈಕ್ರಾನ್‌ನ ಉಪತಳಿ ‘ಬಿಎ.2.12’ ಕಂಡುಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.