ADVERTISEMENT

‘ಮಣಿಪುರದಲ್ಲಿ ಆಫ್‌ಸ್ಪಾ ವಾಪಸ್‌ಗೆ ಒತ್ತಾಯ’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 17:40 IST
Last Updated 5 ಫೆಬ್ರುವರಿ 2022, 17:40 IST

ಗುವಾಹಟಿ: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಆಫ್‌ಸ್ಪಾ) 1958 ಅನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಮಣಿಪುರ ಕಾಂಗ್ರೆಸ್‌ ಘಟಕ ಭರವಸೆ ನೀಡಿದೆ. ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪ್ರಣಾಳಿಕೆ ಪ್ರಕಟಿಸಿದ್ದು, ಸಾಂಸ್ಕೃತಿಕ ವೈವಿಧ್ಯತೆ ಕಾಪಾಡಿಕೊಳ್ಳಲು ನೀತಿ ರೂಪಿಸುವುದಾಗಿ ವಾಗ್ದಾನ ನೀಡಿದೆ. ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ.

ರಾಜ್ಯದ ಸಾಮಾಜಿಕ ಶಾಂತಿ ಮತ್ತು ಸೌಹಾರ್ಧಕ್ಕೆ ಕೆಲ ವರ್ಷಗಳಿಂದ ಧಕ್ಕೆ ಉಂಟಾಗಿದೆ. ಅದನ್ನು ಕಾಪಾಡಲು ಕಾಂಗ್ರೆಸ್‌ ಬದ್ಧವಾಗಿದೆ. ಮಣಿಪುರದ ಎಲ್ಲಾ ಸಮುದಾಯಗಳ ಭಾವನೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವುದು ಹಾಗೂ ಅವರ ಎಲ್ಲ ಆಶೋತ್ತರಗಳನ್ನು ಈಡೇರಿಸಲಾಗುವುದು ಎಂದು ಮಾತು ಕೊಟ್ಟಿದೆ.

ರಾಜ್ಯದ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲಾಗುವುದು. ಇದಕ್ಕಾಗಿ ಪ್ರದೇಶಗಳನ್ನು ಗುರುತಿಸಲಾಗಿದೆ. ರಾಜ್ಯದ ಐತಿಹಾಸಿಕ ಅಂತಾರಾಷ್ಟ್ರೀಯ ಗಡಿಗಳನ್ನು ಮತ್ತು ರಾಜ್ಯದ ಆಂತರಿಕ ಗಡಿಗಳನ್ನು ಕಾಪಾಡಲು ಗಮನ ನೀಡಲಾಗುವುದು. ರಾಜ್ಯದ ಅರಣ್ಯ ಪ್ರದೇಶ, ರಾಷ್ಟ್ರೀಯ ಅಭಯಾರಣ್ಯಗಳು, ವನ್ಯಮೃಗ ಧಾಮಗಳು ಮತ್ತು ಜೈವಿಕ ವೈವಿಧ್ಯ ಹೊಂದಿರುವ ಪ್ರದೇಶಗಳನ್ನು ಸಂರಕ್ಷಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ರಾಜ್ಯದ ಯುವಕರಿಗಾಗಿ ಪ್ರತಿವರ್ಷ 50,000 ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಪ್ರತಿವರ್ಷ ಐದು ಲಕ್ಷ ಪ್ರವಾಸಿಗರು ಮಣಿಪುರಕ್ಕೆ ಭೇಟಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಮತ್ತು ರಾಜ್ಯಕ್ಕೆ ಬೇಕಾಗುವಷ್ಟು ಭತ್ತ ಬೆಳೆಯಲು ಯೋಜನೆ ರೂಪಿಸಲಾಗುವುದು ಎನ್ನಲಾಗಿದೆ.

ರಾಜ್ಯದ ನಾಲ್ಕು ಸಮಾನ ಮನಸ್ಕ ಪಕ್ಷಗಳ ಜೊತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ. ಫೆ.27 ಮತ್ತು ಮಾ.3ರಂದು ಮಣಿಪುರದಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.