ADVERTISEMENT

ಭ್ರಷ್ಟಾಚಾರದ ‘ಚಿಕಿತ್ಸೆ’ಗೆ ನೋಟು ಅಮಾನ್ಯೀಕರಣ ಉತ್ತಮ ‘ಔಷಧಿ’: ಮೋದಿ

ಪಿಟಿಐ
Published 20 ನವೆಂಬರ್ 2018, 14:36 IST
Last Updated 20 ನವೆಂಬರ್ 2018, 14:36 IST
ಮಧ್ಯಪ್ರದೇಶಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ. ಚಿತ್ರ: ಪಿಟಿಐ
ಮಧ್ಯಪ್ರದೇಶಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ. ಚಿತ್ರ: ಪಿಟಿಐ   

ಝಾಬುವಾ, ರೇವಾ:ಭ್ರಷ್ಟಾಚಾರಕ್ಕೆ ಚಿಕಿತ್ಸೆ ನೀಡಲು ನೋಟು ಅಮಾನ್ಯೀಕರಣ ಒಂದು ಉತ್ತಮ ಔಷಧಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಣವನ್ನು ಮರಳಿ ತರಲು ಮತ್ತು ದೇಶದಲ್ಲಿ ಆಳವಾಗಿ ಬೇರೂರಿದ ಭ್ರಷ್ಟಾಚಾರವನ್ನು ತಡೆಯಲು ನೋಟು ರದ್ದತಿಯು ಬಹುಮುಖ್ಯವಾದ ಔಷಧವಾಗಿದೆ ಎಂದು ಮೋದಿ ಪ್ರತಿಪಾದಿಸಿದರು.

ನ.28ರಂದು ನಡೆಯುವ ಮಧ್ಯಪ್ರದೇಶ ವಿಧಾನಸಭೆಚುನಾವಣೆ ಅಂಗವಾಗಿ ಝಾಬುವಾದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಂಗಳವಾರ ಅವರು ಮಾತನಾಡಿದರು.

ADVERTISEMENT

ವಿಧಾನಸಭೆ ಚುನವಾಣೆಯಲ್ಲಿ ‘ಬುದ್ಧಿವಂತಿಕೆಯಿಂದ’ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದ ಮೋದಿ, ‘ಒಬ್ಬ ಕಾಂಗ್ರೆಸ್‌ ಅಭ್ಯರ್ಥಿಯೂ ಕೂಡ ಆಯ್ಕೆಯಾಗುವುದಿಲ್ಲ’ ಎಂದು ಹೇಳಿದರು.

ರೋಗವನ್ನು ತೊಡೆದು ಹಾಕಲು ನಾವು ವಿಷಕಾರಿ ಔಷಧವನ್ನು ಬಳಸುತ್ತೇವೆ. ಅದೇ ರೀತಿ, ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ನಾವು ನೋಟ್‌ ರದ್ದತಿಯನ್ನು ‘ಟೀಜ್‌’(ಕಹಿ) ಔಷಧಿಯಾಗಿ ಬಳಸಿದ್ದೇವೆ ಎಂದು ಹೇಳಿದರು. ಈ ಮೂಲಕ ನೋಟು ಅಮಾನ್ಯೀಕರಣವನ್ನು ಮೋದಿ ಸಮರ್ಥಿಸಿಕೊಂಡರು.

ಕೆಲ ಜನರು ತಮ್ಮ ಹಣವನ್ನು ಹಾಸಿಗೆಗಳು, ಮನೆಗಳು, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಅಡಗಿಸಿಟ್ಟಿದ್ದರು. ಈಗ ಪ್ರತಿ ಪೈಸೆಗೂ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಈ ಹಣವನ್ನು ಸಾಮಾನ್ಯ ಜನರ ಕಲ್ಯಾಣ ಕಾರ್ಯಗಳಿಗೆ ಸರಿಯಾಗಿ ಬಳಸುತ್ತಿದ್ದೇವೆ ಎಂದರು.

ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ಯಾವುದೇ ಗ್ಯಾರಂಟಿ ಪಡೆಯದೆ 14 ಕೋಟಿ ಜನರಿಗೆ ಸಾಲ ವಿತರಿಸಲಾಗಿದೆ ಎಂದು ಹೇಳಿದರು.

ನಾವು(ಬಿಜೆಪಿ ನೇತೃತ್ವದ ಸರ್ಕಾರ) ನಾಲ್ಕು ವರ್ಷಗಳಲ್ಲಿ ಮಾಡಿದ ಕೆಲಸವನ್ನು ಮಾಡಲು ಕಾಂಗ್ರೆಸ್‌ಗೆ 10 ವರ್ಷಗಳು ಬೇಕು ಎಂದು ಟೀಕಿಸಿದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಸಮಯವನ್ನು ನೆನಪಿಸಿಕೊಳ್ಳಿ, ಜನರ ಪರಿಸ್ಥಿತಿ ಹೇಗಿತ್ತು? ಕಾಂಗ್ರೆಸ್‌ ರಾಜ್ಯದ ಯೋಗಕ್ಷೇಮದ ಬಗ್ಗೆ ಎಂದೂ ಯೋಚಿಸಲಿಲ್ಲ ಎಂದು ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿದರು.

2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಉತ್ತಮ ಮನೆಗಳನ್ನು ಒದಗಿಸುವುದು ನನ್ನ ಕನಸು. ಅಂತಹ ಮನೆಗಳ ಕೀಲಿಗಳನ್ನು ನಾವು ಈಗಾಗಲೇ 1.25 ಕೋಟಿ ಜನರಿಗೆ ನೀಡಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.