ADVERTISEMENT

Tamil Nadu Rains | ತಮಿಳುನಾಡಿನಲ್ಲಿ ಭಾರಿ ಮಳೆ: ಹಲವೆಡೆ ಶಾಲೆಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 5:16 IST
Last Updated 12 ಡಿಸೆಂಬರ್ 2024, 5:16 IST
<div class="paragraphs"><p>ತಮಿಳುನಾಡಿನಲ್ಲಿ&nbsp;ಮಳೆ </p></div>

ತಮಿಳುನಾಡಿನಲ್ಲಿ ಮಳೆ

   

-ಪಿಟಿಐ ಚಿತ್ರ

ಚೆನ್ನೈ: ತಮಿಳುನಾಡಿನ ಹಲವೆಡೆ ಗುರುವಾರ ಭಾರಿ ಮಳೆಯಾಗಿದ್ದು, ಚೆನ್ನೈ ಮತ್ತಿತರ ಪ್ರಮುಖ ಜಿಲ್ಲೆಗಳಲ್ಲಿ ಶಾಲೆಗಳಿಗೆ ಒಂದು ದಿನ ರಜೆ ಘೋಷಿಸಲಾಗಿದೆ.

ADVERTISEMENT

ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ವೇಗವಾಗಿ ಏರಿಕೆಯಾಗುತ್ತಿದ್ದು, ಚೆನ್ನೈನ ಉಪನಗರದಲ್ಲಿರುವ ಎರಡು ಅಣೆಕಟ್ಟುಗಳು ಮತ್ತು ತಿರುವಣ್ಣಾಮಲ್ಲೆ ಜಿಲ್ಲೆಯಲ್ಲಿರುವ ಒಂದು ಅಣೆಕಟ್ಟೆಯ ಶಟರ್‌ಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರೆದು ನೀರನ್ನು ಹೊರಬಿಟ್ಟಿದ್ದಾರೆ.

ಸಾತನೂರು ಅಣೆಕಟ್ಟೆಯಿಂದ 13,000 ಕ್ಯುಸೆಕ್ಸ್‌ ನೀರನ್ನು ಹೊರಬಿಡಲಾಗಿದೆ. ಚೆಂಬರಂಬಕ್ಕಂನಿಂದ 3,500 ಕ್ಯುಸೆಕ್ಸ್ ಮತ್ತು ಪೋಂಡಿ ಅಣೆಕಟ್ಟೆಯಿಂದ 1,000 ಕ್ಯುಸೆಕ್ಸ್‌ ನೀರನ್ನು ಹೊರಬಿಡಲಾಗಿದೆ.

ಬುಧವಾರ ರಾತ್ರಿ ಮತ್ತು ಗುರುವಾರ ಚೆನ್ನೈ, ತಿರುವಳ್ಳೂರು, ಚೆಂಗಲ್‌ಪೇಟ್‌, ಕಾಂಚೀಪುರಂ, ವಿಲ್ಲುಪುರಂ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಈ ಪ್ರದೇಶಗಳೂ ಸೇರಿದಂತೆ ಕಲ್ಲಕುರಿಚಿ, ತಿರುವರೂರು, ತಾಂಜಾವೂರು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಸ್ಥಳೀಯ ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.

ಚೆನ್ನೈ, ತಿರುವಳ್ಳೂರು, ಚೆಂಗಲ್‌ಪೇಟ್‌, ಕಾಂಚೀಪುರಂ, ವಿಲ್ಲುಪುರಂ, ರಾಮನಾಥಪುರಂ, ತಾಂಜಾವೂರು, ಕಡಲೂರು ಜಿಲ್ಲೆಗಳಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ತಿರುವರೂರು ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆಯು ನೀರಿನಲ್ಲಿ ಮುಳುಗಿದೆ. ಮನ್ನಾರ್‌ಗುಡಿಯಲ್ಲಿ ಮೂರು ವಿದ್ಯುತ್‌ ಕಂಬಗಳು ಉರುಳಿಬಿದ್ದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈನಲ್ಲಿ ಕನಿಷ್ಠ ಮೂರು ಸುರಂಗ ಮಾರ್ಗಗಳು (ಸಬ್‌ ವೇ) ನೀರಿನಲ್ಲಿ ಮುಳುಗಿದ್ದು, ಈ ಮಾರ್ಗವಾಗಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನೀರು ಹೊರಹಾಕುವ ಪ್ರಯತ್ನ ಮುಂದುವರಿದಿದೆ.

ತುರ್ತು ಸ್ಥಿತಿ ನಿರ್ಮಾಣವಾದಲ್ಲಿ ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳದ (ಎನ್‌ಡಿಆರ್‌ಎಫ್‌)  ಆರು ತಂಡಗಳು ಸನ್ನದ್ಧವಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ತಗ್ಗು ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಸರ್ಕಾರ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ದಕ್ಷಿಣದ ಜಿಲ್ಲೆಗಳು ಮತ್ತು ಅವುಗಳ ಒಳನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. 

ಕೇರಳ: 3 ಜಿಲ್ಲೆಗಳಿಗೆ ರೆಡ್ ಅಲರ್ಟ್‌

ತಿರುವನಂತಪುರ: ಕೇರಳದ ಹಲವೆಡೆ ಗುರುವಾರ ಬೆಳಿಗ್ಗೆ ಭಾರಿ ಮಳೆಯಾಗಿದ್ದು ಮೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಪಟ್ಟಣಂತಿಟ್ಟು ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಐಎಂಡಿ ‘ರೆಡ್‌ ಅಲರ್ಟ್‌’ ಘೋಷಣೆ ಮಾಡಲಾಗಿದೆ. ತಿರುವನಂತಪುರ ಕೊಲ್ಲಂ ಅಲಪ್ಪುಳ ಕೊಟ್ಟಾಯಂ ಮತ್ತು ತೃಶೂರ್ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್ ಘೋಷಿಸಿದೆ. ಪಾಲಕ್ಕಾಡ್‌ ಮಲಪ್ಪುರಂ ಕೋಯಿಕೋಡ್ ವಯನಾಡ್‌ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’ ಘೋಷಣೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.