ADVERTISEMENT

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಒಡಿಶಾ, ಆಂಧ್ರದಲ್ಲಿ ಚಂಡಮಾರುತ ಸಾಧ್ಯತೆ

ಪಿಟಿಐ
Published 25 ಮಾರ್ಚ್ 2022, 5:00 IST
Last Updated 25 ಮಾರ್ಚ್ 2022, 5:00 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಭುವನೇಶ್ವರ: ಈಶಾನ್ಯ ಮತ್ತು ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತವಾಗಿ ಒಡಿಶಾ ಮತ್ತು ಆಂಧ್ರ ಪ್ರದೇಶದ ಕಡೆಗೆ ಚಲಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ವಾಯುಭಾರ ಕುಸಿತವು ಆಂಧ್ರ ಪ್ರದೇಶದ ಕಳಿಂಗಪಟ್ಟಣಂನಿಂದ 590 ಕಿಮೀ ಪೂರ್ವಕ್ಕೆ ಮತ್ತು ಗೋಪಾಲ್‌ಪುರದಿಂದ 510 ಕಿಮೀ ಪೂರ್ವ-ಆಗ್ನೇಯಕ್ಕೆ ಕೇಂದ್ರೀಕೃತವಾಗಿದೆ ಎಂದು ಅದು ಹೇಳಿದೆ.

‘ಇದು ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಪಶ್ಚಿಮಕ್ಕೆ ಚಲಿಸಿ, ಮಾರ್ಚ್ 26ರ ಸಂಜೆಯ ವೇಳೆಗೆ ಕಳಿಂಗಪಟ್ಟಣಂ ಸುತ್ತ ವಿಶಾಖಪಟ್ಟಣಂ ಮತ್ತು ಗೋಪಾಲಪುರ ನಡುವೆ ಉತ್ತರ ಆಂಧ್ರ ಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯನ್ನು ದಾಟಬಹುದು’ ಎಂದು ಹವಾಮಾನ ಇಲಾಖೆ ಹೇಳಿದೆ.

ಚಂಡಮಾರುತದ ಪ್ರಭಾವದಿಂದಾಗಿ ಒಡಿಶಾ ಮತ್ತು ಆಂಧ್ರ ಪ್ರದೇಶ ಕರಾವಳಿ ಪಪ್ರದೇಶಗಳಲ್ಲಿ ಶನಿವಾರದಂದು ಕೆಲವೆಡೆ ಭಾರೀ ಮಳೆ ಮತ್ತು ಕೆಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ADVERTISEMENT

ಒಡಿಶಾದ ಉತ್ತರ ಒಳನಾಡು, ತೆಲಂಗಾಣ ಮತ್ತು ಛತ್ತೀಸ್‌ಗಡದ ಕೆಲ ಭಾಗಗಳಲ್ಲಿ ಭಾನುವಾರವೂ ಭಾರೀ ಮಳೆಯಾಗಬಹುದು. ಅಂತೆಯೇ, ಮಾರ್ಚ್ 27ಕ್ಕೆ ಒಡಿಶಾ ಮತ್ತು ತೆಲಂಗಾಣದ ಬೇರೆ ಬೇರೆ ಸ್ಥಳಗಳಲ್ಲಿ ಸಾಧಾರಣ ಮತ್ತು ಅಧಿಕ ಮಳೆಯಾಗುವ ಸಾಧ್ಯತೆ ಇದೆ.

ಗಾಳಿಯ ವೇಗವು ಗಂಟೆಗೆ 50-60 ಕಿಮೀ ತಲುಪುತ್ತದೆ. ವಾಯುವ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಗಂಟೆಗೆ 70 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. ಗಾಳಿಯ ವೇಗ ಕ್ರಮೇಣ ಗಂಟೆಗೆ 70-80 ಕಿಮೀಗೆ ಏರಬಹುದು. ಭಾನುವಾರದಂದು ಗಂಟೆಗೆ 90 ಕಿಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಹವಾಮಾನ ಕಚೇರಿ ತಿಳಿಸಿದೆ.

ಮುಂದಿನ ಮೂರು ದಿನಗಳಲ್ಲಿ ಸಮುದ್ರದ ಪರಿಸ್ಥಿತಿ ಅತ್ಯಂತ ಪ್ರಕ್ಷುಬ್ಧವಾಗಲಿದ್ದು, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಮೀನುಗಾರರಿಗೆ ಮಾರ್ಚ್ 25 ರಿಂದ 27 ರವರೆಗೆ ಪೂರ್ವ-ಮಧ್ಯ ಮತ್ತು ಪಕ್ಕದ ಈಶಾನ್ಯ ಬಂಗಾಳಕೊಲ್ಲಿಗೆ ತೆರಳದಂತೆ ತಿಳಿಸಲಾಗಿದೆ.

ಒಡಿಶಾದ ವಿಶೇಷ ಪರಿಹಾರ ಆಯುಕ್ತರು (ಎಸ್‌ಆರ್‌ಸಿ) ಹವಾಮಾನ ಮುನ್ಸೂಚನೆಯ ದೃಷ್ಟಿಯಿಂದ ಮುಂಜಾಗ್ರತೆ ವಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.