ADVERTISEMENT

ಜೂನ್‌ 14ಕ್ಕೆ ತೆರೆಯಲ್ಲ ಶಬರಿಮಲೆ: ಕೇರಳ ಸರ್ಕಾರದ ನಿರ್ಧಾರ

ಪಿಟಿಐ
Published 11 ಜೂನ್ 2020, 15:27 IST
Last Updated 11 ಜೂನ್ 2020, 15:27 IST
ಶಬರಿಮಲೆ
ಶಬರಿಮಲೆ   

ತಿರುವನಂತಪುರ: ಶಬರಿಮಲೆಗೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಕೇರಳ ಸರ್ಕಾರ ತೀರ್ಮಾನ ಬದಲಾಯಿಸಿದೆ.

ಕೋವಿಡ್‌–19 ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶಕ್ಕೆ ಮುಖ್ಯ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡದೇ ಇರಲು ಕೇರಳ ಸರ್ಕಾರ ನಿರ್ಧರಿಸಿದೆ.

ತಿಂಗಳ ಪೂಜೆ ಜೂನ್‌ 14ರಿಂದ ಆರಂಭವಾಗಲಿದ್ದು, ದೇವಸ್ಥಾನದೊಳಗೆ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡುವುದಾಗಿ ಕಳೆದ ವಾರ ಕೇರಳ ಸರ್ಕಾರ ಘೋಷಿಸಿತ್ತು. ಇದಾದ ಬೆನ್ನಲ್ಲೇ ಮುಖ್ಯ ಅರ್ಚಕರು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಪತ್ರ ಬರೆದು, ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದರು.

ADVERTISEMENT

ಮುಖ್ಯ ಅರ್ಚಕರು ಹಾಗೂ ಟಿಡಿಬಿ ಪದಾಧಿಕಾರಿಗಳ ಜೊತೆ ನಡೆದ ಸಭೆ ಬಳಿಕ ಮಾಹಿತಿ ನೀಡಿದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌, ‘ಜೂನ್‌ 19ರಿಂದ ಆರಂಭವಾಗಬೇಕಿದ್ದ 10 ದಿನಗಳ ಉತ್ಸವವನ್ನೂ ಮುಂದೂಡಲಾಗಿದೆ. ಮಾರ್ಚ್‌ನಲ್ಲೇ ಈ ಉತ್ಸವ ನಡೆಯಬೇಕಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದನ್ನು ಮುಂದೂಡಲಾಗಿತ್ತು. ತಂತ್ರಿಯವರ ಸಲಹೆಯನ್ನು ನಾವು ಪರಿಗಣಿಸಿದ್ದೇವೆ. ದಿನನಿತ್ಯದ ಪೂಜೆಗೆ ಕೇವಲ ಅರ್ಚಕರು ಹಾಗೂ ಅಗತ್ಯ ಸಿಬ್ಬಂದಿಗಷ್ಟೇ ದೇವಸ್ಥಾನದ ಆವರಣದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.