ADVERTISEMENT

ಮಹಾರಾಷ್ಟ್ರ: ಮುಂಡೆ ರಾಜೀನಾಮೆ; ಮಾಜಿ ಪತ್ನಿ ಸುಳಿವು

ಸಚಿವ ಸ್ಥಾನದಿಂದ ಕೆಳಗಿಳಿಯುವ ಅನಿವಾರ್ಯ ಎದುರಾಗಿದೆ: ಕರುಣಾ ಮುಂಡೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 14:52 IST
Last Updated 2 ಮಾರ್ಚ್ 2025, 14:52 IST
ಧನಂಜಯ ಮುಂಡೆ
ಧನಂಜಯ ಮುಂಡೆ   

ಮುಂಬೈ: ಮಹಾರಾಷ್ಟ್ರ ಸಚಿವ ಧನಂಜಯ ಮುಂಡೆ ಅವರು ಸೋಮವಾರ ರಾಜೀನಾಮೆ ನೀಡಲಿದ್ದಾರೆ ಎಂದು ಅವರ ಮಾಜಿ ಪತ್ನಿ ಕರುಣಾ ಮುಂಡೆ ಅವರು ಹೇಳಿದ್ದಾರೆ.

ಎನ್‌ಸಿಪಿಯ ಅಜಿತ್‌ ಪವಾರ್‌ ಬಣದ ನಾಯಕರಾಗಿರುವ ಧನಂಜಯ ಅವರು ಪ್ರಸ್ತುತ ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೂ ಆಪ್ತರಾಗಿರುವ ಧನಂಜಯ ಅವರ ರಾಜೀನಾಮೆ ಸುದ್ದಿಯೂ ಇದೀಗ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಧನಂಜಯ ಅವರ ಆಪ್ತ ವಾಲ್ಮಿಕ್‌ ಕರಾಡ್‌ನನ್ನು ಸಂತೋಷ್‌ ದೇಶ್‌ಮುಖ್‌ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಎಂದು ಉಲ್ಲೇಖಿಸಿ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ADVERTISEMENT

ಧನಂಜಯ ಅವರ ರಾಜೀನಾಮೆ ಸೂಚನೆಯನ್ನು ಕರುಣಾ ಮುಂಡೆ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ನೀಡಿದ್ದರು. ಬಳಿಕ ಸುದ್ದಿಗಾರೊಂದಿಗೆ ಮಾತನಾಡುವಾಗಲೂ ಅದನ್ನು ಪುನರುಚ್ಚರಿಸಿದ ಅವರು, ‘ನನ್ನ ಮಾಹಿತಿ ಪ್ರಕಾರ, ರಾಜೀನಾಮೆ ನೀಡುವಂತೆ ಧನಂಜಯ ಅವರಿಗೆ ಎರಡು ದಿನಗಳ ಹಿಂದೆಯೇ ಸೂಚನೆ ಬಂದಿದೆ. ಅಧಿವೇಶನಕ್ಕೂ ಮೊದಲು ಅವರು ಈ ಬಗ್ಗೆ ಮಾಹಿತಿ ನೀಡಲಿದ್ದಾರೆ’ ಎಂದರು.

ಪವನ ವಿದ್ಯುತ್ ಕಂಪನಿಯಿಂದ ಹಣ ವಸೂಲಿ ಮಾಡುವುದಕ್ಕೆ ಅಡ್ಡಿಯುಂಟು ಮಾಡುವವರನ್ನು ನಿರ್ನಾಮ ಮಾಡುವಂತೆ ವಾಲ್ಮೀಕ್‌ ಕರಾಡ್‌ ಇತರ ಆರೋಪಿಗಳಿಗೆ ಸೂಚಿಸಿದ್ದರು ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ಆಪ್ತನ ವಿರುದ್ಧದ ಪ್ರಕರಣದಲ್ಲಿನ ಬೆಳವಣಿಗೆಯು ಧನಂಜಯ ಮುಂಡೆ ಅವರಿಗೆ ರಾಜಕೀಯ ವಲಯದಲ್ಲಿ ಸವಾಲಾಗಿ ಪರಿಣಮಿಸಿದೆ.

Highlights - * ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ * ಮುಂಡೆಗೆ ಕಗ್ಗಂಟಾದ ಸಂತೋಷ್‌ ದೇಶ್‌ಮುಖ್‌ ಹತ್ಯೆ ಪ್ರಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.