ADVERTISEMENT

ಉಪರಾಷ್ಟ್ರಪತಿ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ ಧನಕರ್‌: ಕಾರಣ ನಿಗೂಢ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 22:30 IST
Last Updated 22 ಜುಲೈ 2025, 22:30 IST
ಜಗದೀಪ್‌ ಧನಕರ್‌
ಜಗದೀಪ್‌ ಧನಕರ್‌   

ನವದೆಹಲಿ: ಜಗದೀಪ್‌ ಧನಕರ್‌ ಅವರು ಉಪರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿರುವುದರ ಹಿಂದಿನ ಕಾರಣ ನಿಗೂಢವಾಗಿಯೇ ಉಳಿದುಕೊಂಡಿದೆ. ಅವರ ದಿಢೀರ್‌ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. 

ಆರೋಗ್ಯ ಸಮಸ್ಯೆಯಿಂದ ರಾಜೀನಾಮೆ ನೀಡಿರುವುದಾಗಿ ಧನಕರ್‌ ಹೇಳಿಕೊಂಡಿದ್ದರೂ ಇದರ ಹಿಂದೆ ‘ಬೇರೆಯದೇ ಆದ ಬಲವಾದ’ ಕಾರಣ ಇದೆ ಎಂದು ಕಾಂಗ್ರೆಸ್‌ ಮಂಗಳವಾರ ಪ್ರತಿಪಾದಿಸಿದೆ. ‘ಆರೋಗ್ಯದ ಮೇಲಿನ ಕಾಳಜಿ’ಗೆ ಹೊರತಾಗಿರುವ ಕಾರಣಗಳ ಬಗ್ಗೆ ಊಹಾಪೋಹಗಳು ಹರಡಿವೆ.

ಉನ್ನತ ಹುದ್ದೆಯಲ್ಲಿರುವ ಒಬ್ಬ ವ್ಯಕ್ತಿ ರಾಜೀನಾಮೆ ನೀಡಿದಾಗ ಅವರ ಬಗ್ಗೆ ಹೊಗಳಿಕೆಯ ಮಾತುಗಳು ಕೇಳಿಬರುವುದು ಸಹಜ. ಆದರೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಸರ್ಕಾರವು ಅವರ ರಾಜೀನಾಮೆಯನ್ನೇ ಬಯಸುತ್ತಿತ್ತು ಎಂಬುದನ್ನು ಇದು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. 

ADVERTISEMENT

ಸಂಸತ್ ಅಧಿವೇಶನದ ಮೊದಲ ದಿನ ನಡೆದ ಘಟನಾವಳಿಗಳೇ ಉಪರಾಷ್ಟ್ರಪತಿಯವರ ರಾಜೀನಾಮೆಗೆ ಕಾರಣ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಹರಡಿವೆ. ‘ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರನ್ನು ಪದಚ್ಯುತಿಗೊಳಿಸುವ ನೋಟಿಸ್‌ ಸ್ವೀಕರಿಸುವ ಮುನ್ನ ಧನಕರ್‌ ಅವರು ಕೇಂದ್ರ ಸರ್ಕಾರದ ಜತೆಗೆ ಸಮಾಲೋಚಿಸಿರಲಿಲ್ಲ. ಇದು ಬಿಜೆಪಿ ನಾಯಕರಿಗೆ ಅಸಮಾಧಾನ ಉಂಟುಮಾಡಿದೆ’ ಎಂದು ಮೂಲಗಳು ತಿಳಿಸಿವೆ.

ಸೋಮವಾರ ನಡೆದ ರಾಜ್ಯಸಭೆಯ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಸದನದ ನಾಯಕ ಜೆ.ಪಿ. ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಅನುಪಸ್ಥಿತಿಯು ಧನಕರ್‌ ಬಗ್ಗೆ ಸರ್ಕಾರಕ್ಕೆ ಅಸಮಾಧಾನವಿರುವುದನ್ನು ಸೂಚಿಸುವ ಮತ್ತೊಂದು ಬೆಳವಣಿಗೆ ಆಗಿತ್ತು.

ಇದೇ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ‘ಧನಕರ್ ರಾಜೀನಾಮೆ ಹಿಂದೆ ಬೇರೆ ಯಾವುದೋ ಕಾರಣ ಇದೆ’ ಎಂದು ಹೇಳಿದೆ. ಸೋಮವಾರ ಮಧ್ಯಾಹ್ನ ನಡೆದ ಬಿಎಸಿ ಮೊದಲ ಸಭೆಗೆ ಧನಕರ್‌ ಅವರು ನೇತೃತ್ವ ವಹಿಸಿದ್ದರು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ಜೆ.ಪಿ. ನಡ್ಡಾ ಮತ್ತು ಕಿರಣ್ ರಿಜಿಜು ಸೇರಿದಂತೆ ಹೆಚ್ಚಿನ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಕೆಲಹೊತ್ತು ಚರ್ಚೆ ನಡೆದ ಬಳಿಕ ಸಂಜೆ 4.30ಕ್ಕೆ ಮತ್ತೆ ಸಭೆ ಸೇರಲು ಬಿಎಸಿ ನಿರ್ಧರಿಸಿತು’ ಎಂದಿದ್ದಾರೆ. 

‘ಸಂಜೆ 4.30ಕ್ಕೆ ಧನಕರ್‌ ಅಧ್ಯಕ್ಷತೆಯಲ್ಲಿ ಬಿಎಸಿ ಮತ್ತೆ ಸಭೆ ಸೇರಿತು. ಸಭೆಯಲ್ಲಿದ್ದವರು ನಡ್ಡಾ ಮತ್ತು ರಿಜಿಜು ಅವರಿಗಾಗಿ ಕಾದರು. ಆದರೆ ಅವರು ಬರಲಿಲ್ಲ. ಇಬ್ಬರು ಹಿರಿಯ ಸಚಿವರು ಸಭೆಗೆ ಬರುತ್ತಿಲ್ಲ ಎಂಬ ಮಾಹಿತಿಯನ್ನು ಧನಕರ್‌ ಅವರಿಗೆ ನೀಡಿರಲಿಲ್ಲ. ಅಸಮಾಧಾನಗೊಂಡಂತೆ ಕಾಣುತ್ತಿದ್ದ ಧನಕರ್‌ ಅವರು ಬಿಎಸಿಯನ್ನು ಮಂಗಳವಾರ ಮಧ್ಯಾಹ್ನ 1ಕ್ಕೆ ಮರು ನಿಗದಿಪಡಿಸಿದ್ದರು’ ಎಂದು ಹೇಳಿದ್ದಾರೆ.

ಆದ್ದರಿಂದ ಸೋಮವಾರ ಮಧ್ಯಾಹ್ನ 1ರಿಂದ ಸಂಜೆ 4.30ರ ನಡುವೆ ‘ತುಂಬಾ ಗಂಭೀರವಾದ ಏನೋ’ ನಡೆದಿದೆ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಭೆಗೆ ಗೈರಾಗಿದ್ದರ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿರುವ ನಡ್ಡಾ, ‘ಇಬ್ಬರಿಗೂ ತುರ್ತು ಕೆಲಸ ಇದ್ದ ಕಾರಣ ಬಿಎಸಿ ಸಭೆಗೆ ಹಾಜರಾಗಿಲ್ಲ. ಉಪರಾಷ್ಟ್ರಪತಿಯವರ ಕಚೇರಿಗೆ ಈ ಬಗ್ಗೆ ಮುಂಚಿತವಾಗಿ ತಿಳಿಸಲಾಗಿತ್ತು’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್‌’ನಲ್ಲಿ ಸಂಕ್ಷಿಪ್ತ ಪೋಸ್ಟ್‌ ಹಾಕಿದ್ದನ್ನು ಬಿಟ್ಟರೆ, ಆಡಳಿತಾರೂಢ ಮೈತ್ರಿಕೂಟದ ಯಾವುದೇ ಪ್ರಮುಖ ನಾಯಕರು ಧನಕರ್‌ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.