ADVERTISEMENT

ಜನರಿಲ್ಲದ ನಾಡು, ಊರಲ್ಲೇ ಬೆಳೆದಿದೆ ಕಾಡು

ಉತ್ತರಾಖಂಡ: ವಲಸೆ ಹೋದ ಜನರು, ಬರಿದಾಗಿವೆ ಹಳ್ಳಿಗಳು

ಪಿಟಿಐ
Published 9 ಡಿಸೆಂಬರ್ 2018, 20:45 IST
Last Updated 9 ಡಿಸೆಂಬರ್ 2018, 20:45 IST
ಉತ್ತರಾಖಂಡದ ಗುಡ್ಡಗಾಡು ಪ್ರದೇಶದ ಗ್ರಾಮಗಳು ಚಿತ್ರಕೃಪೆ:ಹಿಂದೂಸ್ತಾನ್ ಟೈಮ್ಸ್‌
ಉತ್ತರಾಖಂಡದ ಗುಡ್ಡಗಾಡು ಪ್ರದೇಶದ ಗ್ರಾಮಗಳು ಚಿತ್ರಕೃಪೆ:ಹಿಂದೂಸ್ತಾನ್ ಟೈಮ್ಸ್‌   

ಡೆಹ್ರಾಡೂನ್‌: ಆಳೆತ್ತರ ಕಳೆ ಬೆಳೆದು ನಿಂತ ಹೊಲ, ಗದ್ದೆಗಳು. ಹಾಡಹಗಲೇ ರಾಜಾರೋಷವಾಗಿ ತಿರುಗುವ ಕಾಡು ಪ್ರಾಣಿಗಳು. ಜನರಿಲ್ಲದೆ ಪಾಳುಬಿದ್ದ ಮನೆಗಳು ಮತ್ತು ಸ್ಮಶಾನ ಮೌನ!

ಉತ್ತರಾಖಂಡದ ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಿದು. ಇದು ಕೇವಲ ಒಂದು ಗ್ರಾಮದ ಕಥೆಯಲ್ಲ. ರಾಜ್ಯದ 700ಕ್ಕೂ ಹೆಚ್ಚು ಗ್ರಾಮಗಳ ಸ್ಥಿತಿ ಹೀಗೆಯೇ ಇದೆ.

ಕೆಲಸ ಹುಡುಕಿಕೊಂಡು ವಲಸೆ ಹೋದ ಸಾವಿರಾರು ಜನರು ಮರಳಿ ಬಾರದ ಕಾರಣ ಉತ್ತರಾಖಂಡದಲ್ಲಿ 734 ಹೆಚ್ಚು ನಿರ್ಜನ ಗ್ರಾಮಗಳು ಸೃಷ್ಟಿಯಾಗಿವೆ.

ADVERTISEMENT

ರಾಜ್ಯದಲ್ಲಿ 16,500 ಗ್ರಾಮಗಳಿದ್ದು, ಆ ಪೈಕಿ ಗುಡ್ಡಗಾಡು ಪ್ರದೇಶಗಳಲ್ಲಿರುವ ಗ್ರಾಮಗಳು ಅಭಿವೃದ್ಧಿ ಕಂಡಿಲ್ಲ. ಹಾಗಾಗಿ ಉದ್ಯೋಗ ಹುಡುಕಿಕೊಂಡು ಜನರು ವಲಸೆ ಹೋಗುತ್ತಿದ್ದಾರೆ. ಏಳು ವರ್ಷಗಳಲ್ಲಿ ಉತ್ತರಾಖಂಡದ ಗುಡ್ಡಗಾಡಿನ 734 ಹಳ್ಳಿಗಳು ಬರಿದಾಗಿವೆ.

ಗ್ರಾಮಗಳು ನಿರ್ಜನವಾಗುತ್ತಿರುವ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ವಲಸೆ ತಡೆ ಆಯೋಗದ ವರದಿ ಆತಂಕ ವ್ಯಕ್ತಪಡಿಸಿದೆ.

ಗುಡ್ಡಗಾಡು ಜಿಲ್ಲೆಗಳಾದ ಪೌರಿ ಮತ್ತು ಅಲ್ಮೋಡಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನರು ವಲಸೆ ಹೋಗಿದ್ದಾರೆ. ಪೌರಿ ಜಿಲ್ಲೆಯ 298 ಹಳ್ಳಿಗಳ ಪೈಕಿ 186 ಹಳ್ಳಿಗಳು ಜನರಿಲ್ಲದೆ ಬಿಕೊ ಎನ್ನುತ್ತಿವೆ.

ಪುರುಷರು ಉದ್ಯೋಗ ಹುಡುಕಿಕೊಂಡು ವಲಸೆ ಹೋದ ಕಾರಣ ಕೆಲವು ಗ್ರಾಮಗಳಲ್ಲಿ ಬರೀ ಮಹಿಳೆಯರಿದ್ದಾರೆ. ಯಾರಾದರು ಮೃತಪಟ್ಟರೆ ಪಕ್ಕದ ಊರಿನ ಪುರುಷರು ಅಂತ್ಯಕ್ರಿಯೆ ನಡೆಸುತ್ತಾರೆ.

ಬಹುತೇಕ ಗ್ರಾಮಗಳಲ್ಲಿ ಹೆಚ್ಚೆಂದರೆ 8–10 ಜನರು ವಾಸಿಸುತ್ತಿದ್ದಾರೆ. ಪೌರಿ ಜಿಲ್ಲೆಯ ನೈನಿದಂಡಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಪೋಸ್ಟ್‌ ಮಾಸ್ಟರ್‌ ಮತ್ತು ಅವರ ಪತ್ನಿಯನ್ನು ಬಿಟ್ಟರೆ ಬೇರೆ ಯಾರೂ ಇಲ್ಲ.

‘ಆಗಾಗ ಚಿರತೆಗಳು ಗ್ರಾಮದೊಳಗೆ ನುಗ್ಗುವುದರಿಂದ ಮಧ್ಯಾಹ್ನ ನಾಲ್ಕು ಗಂಟೆಗೆ ಮನೆಯ ಬಾಗಿಲು ಮುಚ್ಚಿಕೊಳ್ಳುತ್ತೇವೆ. ಸಂಜೆಯಾದರೆ ಪ್ರಾಣ ಭೀತಿಯಿಂದ ಮನೆಯ ಹೊರಗೆ ಕಾಲಿಡುವುದಿಲ್ಲ’ ಎನ್ನುತ್ತಾರೆ ಪೋಸ್ಟ್ ಮಾಸ್ಟರ್‌.

ಉದ್ಯೋಗಕ್ಕಾಗಿ ಶಾಶ್ವತ ವಲಸೆ

ಬಿಹಾರ ಮತ್ತು ಉತ್ತರ ಪ್ರದೇಶದ ಕೂಲಿ, ಕಾರ್ಮಿಕರು ಗ್ರಾಮಗಳಿಗೆ ಮರಳುತ್ತಾರೆ. ಆದರೆ, ಉತ್ತರಾಖಂಡದ ಸಮಸ್ಯೆ ವಿಭಿನ್ನವಾಗಿದೆ.

ಬಹುತೇಕ ಗ್ರಾಮಗಳಲ್ಲಿ ಆದಾಯ ತರುವ ಕೆಲಸಗಳಿಲ್ಲ. ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳಂತೂ ಕನಸಿನ ಮಾತು. ಹೀಗಾಗಿ ಕೆಲಸ ಹುಡುಕಿಕೊಂಡು ಹೋದ ಯಾರೂ ಮರಳಿ ಬಂದ ಉದಾಹರಣೆಗಳಿಲ್ಲ.

ಶಾಶ್ವತವಾಗಿ ಪಟ್ಟಣ, ನಗರಗಳಲ್ಲಿಯೇ ನೆಲೆ ಕಂಡುಕೊಳ್ಳುವ ಅವರು ತಮ್ಮೊಂದಿಗೆ ಗ್ರಾಮದ ಇತರರನ್ನು ಕರೆದೊಯ್ಯುತ್ತಾರೆ.

‘ಪರಿಸರ ಪ್ರವಾಸೋದ್ಯಮ ಪರಿಹಾರ’

ಉತ್ತರಾಖಂಡದಲ್ಲಿ ಅನೇಕ ಪುರಾತನ ದೇವಾಲಯಗಳಿದ್ದು ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಬಹುದು ಎನ್ನುತ್ತಾರೆ ಉತ್ತರಾಖಂಡ ಗ್ರಾಮಾಭಿವೃದ್ಧಿ ಮತ್ತು ವಲಸೆ ತಡೆ ಆಯೋಗದ ಉಪಾಧ್ಯಕ್ಷ ಎಸ್‌.ಎಸ್‌. ನೇಗಿ.

ದೇವಸ್ಥಾನದ ಸುತ್ತಮುತ್ತ ವಸತಿ, ಆಹಾರ, ಸಾರಿಗೆ, ಮಾರ್ಗದರ್ಶನದಂತಹ ಮೂಲಸೌಕರ್ಯ ಕಲ್ಪಿಸಿದರೆ ಸಾವಿರಾರು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ದೊರೆಯುತ್ತದೆ. ಆದಾಯವೂ ಹೆಚ್ಚುತ್ತದೆ ಎನ್ನುವುದು ಅವರ ಅಭಿಪ್ರಾಯ.

ನದಿ, ಬೆಟ್ಟ, ಕಣಿವೆಯಂತಹ ಸುಂದರ ಪರಿಸರದಿಂದ ಆವೃತ್ತವಾಗಿರುವ ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ ಪ್ರವಾಸಿಗರು ಹರಿದು ಬರುತ್ತಾರೆ.

ಹೋಂ ಸ್ಟೆ, ಟ್ರೆಕ್ಕಿಂಗ್‌, ರ‍್ಯಾಪ್ಟಿಂಗ್‌, ಜಲಕ್ರೀಡೆ ಆರಂಭಿಸಿದರೆ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ. ಇದರಿಂದ ವಲಸೆ ತಡೆಯಬಹುದು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.