ಚೆನ್ನೈ: ‘ಕೇಂದ್ರವು ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರುತ್ತಿಲ್ಲ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಐಐಟಿ ಮದ್ರಾಸ್‌ನಲ್ಲಿ ನಡೆದ ‘ಥಿಂಕ್ ಇಂಡಿಯಾ ದಕ್ಷಿಣಪಥ ಶೃಂಗಸಭೆ– 2025’ರಲ್ಲಿ ಭಾಗವಹಿಸಿದ ಅವರು, ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕೇಂದ್ರವು ರಾಜ್ಯಗಳ ಮೇಲೆ ‘ತ್ರಿಭಾಷಾ ನೀತಿ’ಯನ್ನು ಹೇರುತ್ತಿದೆ ಎನ್ನುವುದು ರಾಜಕೀಯ ಪ್ರೇರಿತ ಆರೋಪ’ ಎಂದು ಅವರು ಹೇಳಿದರು.
‘ನಾವು ಯಾರ ಮೇಲೂ ಯಾವುದೇ ಭಾಷೆಯನ್ನು ಹೇರುತ್ತಿಲ್ಲ. 1 ಮತ್ತು 2ನೇ ತರಗತಿಗಳಿಗೆ ದ್ವಿಭಾಷಾ ಸೂತ್ರ ಇರುತ್ತದೆ. ಇದರಲ್ಲಿ ಒಂದು ಮಾತೃಭಾಷೆ. ತಮಿಳುನಾಡಿನಲ್ಲಾದರೆ ಇದು ತಮಿಳು ಭಾಷೆಯಾಗಿರುತ್ತದೆ. ಇದರ ಜತೆಗೆ ನಿಮ್ಮ ಆಯ್ಕೆಯ ಇನ್ನೊಂದು ಭಾಷೆಯನ್ನು ಕಲಿಸಬಹುದು’ ಎಂದರು.
6ರಿಂದ 10ನೇ ತರಗತಿವರೆಗೆ ‘ತ್ರಿಭಾಷಾ ಸೂತ್ರ’ ಇರುತ್ತದೆ. ಒಂದು ಮಾತೃಭಾಷೆಯಾದರೆ, ಇನ್ನೆರಡು ಆಯ್ಕೆಯ ಭಾಷೆಯಾಗಿರುತ್ತವೆ ಎಂದು ಪ್ರಧಾನ್ ಸ್ಪಷ್ಟಪಡಿಸಿದರು.
‘ಉತ್ತರ ಪ್ರದೇಶದಂತ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವನ್ನು ಹೇಗೆ ಜಾರಿಗೊಳಿಸುತ್ತೀರಿ ಎಂಬ ಪ್ರಶ್ನೆಗೆ, ‘ನಾವು ಆ ರಾಜ್ಯದಲ್ಲೂ ಈ ಸೂತ್ರ ಜಾರಿಗೊಳಿಸುತ್ತೇವೆ. ವಿದ್ಯಾರ್ಥಿಯೊಬ್ಬ ಹಿಂದಿಯನ್ನು ಮಾತೃಭಾಷೆಯಾಗಿ, ನಂತರ ಮರಾಠಿಯನ್ನು ಬಳಿಕ ತಮಿಳನ್ನೂ ಕಲಿಯುತ್ತಾನೆ. ಉತ್ತರ ಪ್ರದೇಶದಲ್ಲಿ ಮೂರನೆಯ ಭಾಷೆಯಾಗಿ ‘ತಮಿಳು’ ಕಲಿಯಲೂ ಅವಕಾಶವಿದೆ’ ಎಂದು ಅವರು ಹೇಳಿದರು.
ಭಾಷೆಗಳು ಯಾವಾಗಲೂ ಸಹಾಯಕವಾಗಿರುತ್ತವೆ. ರಾಜಕೀಯವಾಗಿ ಸಂಕುಚಿತ ಆಲೋಚನೆಗಳನ್ನು ಹೊಂದಿರುವವರು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ ಎಂದ ಪ್ರಧಾನ್, ಹಲವು ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿಗೂ ಮುನ್ನವೇ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಲು ಹೊರಟಿವೆ ಎಂದರು.
‘ತೆಲುಗು ಮಾತನಾಡುವ ವಿದ್ಯಾರ್ಥಿಗಳಿಗೆ 10 ಭಾಷೆಗಳನ್ನು ಕಲಿಸಲು ಪ್ರೋತ್ಸಾಹಿಸಲಾಗುವುದು ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತವಾಗಿಯೂ, ಹಲವು ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸಿದವರು ‘ಜಾಗತಿಕವಾಗಿ ಸ್ಪರ್ಧಾತ್ಮಕ’ತೆ ಬೆಳೆಸಿಕೊಳ್ಳುತ್ತಾರೆ’ ಎಂದು ಹೇಳಿದರು.
ಭಾಷಾ ವಿಭಜನೆ ಸೃಷ್ಟಿಸಲು ಪ್ರಯತ್ನಿಸುವವರು ವಿಫಲರಾಗುತ್ತಿದ್ದಾರೆ. ಸಮಾಜವು ಅವರಿಗಿಂತ ಬಹಳ ಮುಂದೆ ಸಾಗುತ್ತಿದೆ.ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.