ADVERTISEMENT

ರಾಹುಲ್ ಗಾಂಧಿ ಜ್ಞಾನವಿಲ್ಲದ ಹುಸಿ ತಜ್ಞ: ಧರ್ಮೇಂದ್ರ ಪ್ರಧಾನ್ ವ್ಯಂಗ್ಯ

ಪಿಟಿಐ
Published 8 ಸೆಪ್ಟೆಂಬರ್ 2021, 14:07 IST
Last Updated 8 ಸೆಪ್ಟೆಂಬರ್ 2021, 14:07 IST
ಧರ್ಮೇಂದ್ರ ಪ್ರಧಾನ್ (ಪಿಟಿಐ ಚಿತ್ರ)
ಧರ್ಮೇಂದ್ರ ಪ್ರಧಾನ್ (ಪಿಟಿಐ ಚಿತ್ರ)   

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಅನ್ನು ಮುಂದೂಡಬೇಕೆಂದು ಒತ್ತಾಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿಯವರು ಹಕ್ಕಿನ ಕುರಿತು ತಪ್ಪಾದ ಪ್ರಜ್ಞೆ ಹೊಂದಿರುವ, ವಿಪರೀತ ಜಂಭದ ಸ್ವಭಾವವಿರುವ ಮತ್ತು ವಿಷಯಕ್ಕೆ ಸಂಬಂಧಿಸಿ ಏನೇನೂ ಜ್ಞಾನವಿಲ್ಲದ ಹುಸಿ ತಜ್ಞ ಎಂದು ಪ್ರಧಾನ್ ಹೇಳಿದ್ದಾರೆ.

ನೀಟ್‌ ವೇಳಾಪಟ್ಟಿಗೆ ಸಂಬಂಧಿಸಿ ತಜ್ಞರ ಮತ್ತು ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನೇ ರಾಹುಲ್ ಪ್ರಶ್ನಿಸಿದ್ದಾರೆ. ತಿಳಿವಳಿಕೆಯೇ ಇಲ್ಲದ ವಿಷಯಗಳ ಬಗ್ಗೆ ತಜ್ಞರಂತೆ ಹೇಳಿಕೆ ನೀಡುವ ಬದಲು ಅವರು (ರಾಹುಲ್) ತಾವು ಪರಿಣತಿ ಹೊಂದಿರುವ ಸುಳ್ಳು ಹೇಳುವಿಕೆಯನ್ನೇ ಮುಂದುವರಿಸುವುದು ಉತ್ತಮ ಎಂದು ಪ್ರಧಾನ್ ಕುಹಕವಾಡಿದ್ದಾರೆ.

ಸೆಪ್ಟೆಂಬರ್ 12ಕ್ಕೆ ನಿಗದಿಯಾಗಿರುವ ನೀಟ್ ಮತ್ತು ಇತರ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು. ವಿದ್ಯಾರ್ಥಿಗಳ ಸಂಕಷ್ಟದ ವಿಚಾರದಲ್ಲಿ ಕೇಂದ್ರ ಸರ್ಕಾರವು ಕುರುಡಾಗಿದೆ. ವಿದ್ಯಾರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದರು.

ನೀಟ್ ಪರೀಕ್ಷೆ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಬಯಸುವುದಿಲ್ಲ. ಪರೀಕ್ಷೆಯನ್ನು ಮರುನಿಗದಿ ಮಾಡುವಂತೆ ಹೇಳುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿತ್ತು.

‘ರಾಹುಲ್ ಗಾಂಧಿಯವರು ಯಾವುದೇ ಜ್ಞಾನವಿಲ್ಲದೆ ತಮ್ಮನ್ನು ತಾವೇ ತಜ್ಞರೆಂದು ಭಾವಿಸಿದ್ದಾರೆ. ವಿಫಲ ರಾಜಕುಮಾರನು ವಿಪರೀತ ಜಂಭ, ಹಕ್ಕಿನ ಕುರಿತ ತಪ್ಪಾದ ಜ್ಞಾನದಿಂದ ಹೇಳಿರುವುದನ್ನು ಪರಿಗಣಿಸಿ ಪರೀಕ್ಷೆಯನ್ನು ಮರುನಿಗದಿ ಮಾಡಲು ಮತ್ತು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸಲು ಸಾಧ್ಯವಿಲ್ಲ’ ಎಂದು ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.