ADVERTISEMENT

ರಾಜಕಾರಣಿಗಳು, ಅಧಿಕಾರಿಗಳು ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳುವುದಿಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 19 ಮೇ 2021, 15:16 IST
Last Updated 19 ಮೇ 2021, 15:16 IST
.
.   

ನವದೆಹಲಿ: ರಾಜಕಾರಣಿಗಳು ಮತ್ತು ಅಧಿಕಾರಿಗಳು ತಮ್ಮ ವೈಫಲ್ಯ ಮತ್ತು ಅಸಾಮರ್ಥ್ಯವನ್ನು ಒಪ್ಪಿಕೊಳ್ಳುವುದೇ ಇಲ್ಲ. ಅದು ಅವರ ರಕ್ತನಾಳದಲ್ಲಿಯೇ ಇಲ್ಲವಾಗಿದೆ ಎಂದು ದೆಹಲಿ ಹೈಕೋರ್ಟ್‌ ಬುಧವಾರ ಬೇಸರ ವ್ಯಕ್ತಪಡಿಸಿದೆ.

ಕೋವಿಡ್‌–19 ಸೋಂಕು ಆವರಿಸಬಹುದಾದ ಅಪಾಯದ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಂಗದ ಅಧಿಕಾರಿಗಳ ಸ್ಥಿತಿಗತಿಯ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
ಈಗಾಗಲೇ ನ್ಯಾಯಾಂಗದ ಮೂವರು ಅಧಿಕಾರಿಗಳು ರಾಜಧಾನಿ ದೆಹಲಿಯಲ್ಲಿ ಮೃತರಾಗಿದ್ದಾರೆ. ಅವರನ್ನೂ ಸಶಸ್ತ್ರ ಪಡೆಗಳ ಮತ್ತು ಪೊಲೀಸ್‌ ಪಡೆಗಳ ಸಿಬ್ಬಂದಿಯಂತೆ ಮುಂಚೂಣೆ ಕೆಲಸಗಾರರು ಎಂದು ಪರಿಗಣಿಸಿ ಚಿಕಿತ್ಸೆ ನೀಡಬೇಕಿತ್ತು ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.

ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ನ್ಯಾಯಾಂಗದ ಅಧಿಕಾರಿಗಳು ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದಲ್ಲಿ ದೆಹಲಿ ನ್ಯಾಯಾಧೀಶರು ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಹೈಕೋರ್ಟ್‌ ಹಿಂದೆಯೇ ಆದೇಶಿಸಿದೆ. ಅದರಂತೆ ಜಿಲ್ಲೆಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂಬ ದೆಹಲಿ ಸರ್ಕಾರದ ವಾದವನ್ನು ನ್ಯಾಯಪೀಠ ಪರಿಗಣಿಸಲಿಲ್ಲ.

ಭವಿಷ್ಯದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಸೂಕ್ತ ವ್ಯವಸ್ಥೆಯನ್ನೂ ಈಗಲೇ ಜಾರಿಗೆ ತರಬೇಕು. ಅಲ್ಲದೆ ಎಂಥ ಕೆಟ್ಟ ಪರಿಸ್ಥಿತಿ ಎದುರಿಸಲೂ ಸಿದ್ಧವಾಗಿರಬೇಕು ಎಂದು ಪೀಠ ಸೂಚಿಸಿತು.

‘ನ್ಯಾಯಾಧೀಶರ ಕುಟುಂಬದವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ನೀವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ಯಾವುದೇ ಆದೇಶಗಳಿಗೆ ಕಾಯಬೇಕಿಲ್ಲ’ ಎಂದು ದೆಹಲಿ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ರಾಹುಲ್ ಮೆಹ್ರಾ ಅವರಿಗೆ ಹೈಕೋರ್ಟ್‌ ಸೂಚಿಸಿತು. ಈ ಸಮಸ್ಯೆಯನ್ನು ದೆಹಲಿ ಸರ್ಕಾರ ಇದೇ 27ರೊಳಗೆ ಬಗೆಹರಿಸಬೇಕು ಎಂದು ಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.