ADVERTISEMENT

ಬೆಳವಣಿಗೆಯ ಮಾದರಿಗಳು ಮನುಷ್ಯ ಕೇಂದ್ರಿತವಾಗಿರಬೇಕು: ಪ್ರಧಾನಿ ಮೋದಿ

‘ಇಂಡೋ-ಜಪಾನ್ ಸಂವಾದ್‘ ಸಮ್ಮೇಳನ ಪ್ರಧಾನಿ ಪ್ರತಿಪಾದನೆ

ಪಿಟಿಐ
Published 21 ಡಿಸೆಂಬರ್ 2020, 6:30 IST
Last Updated 21 ಡಿಸೆಂಬರ್ 2020, 6:30 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ‌ಜಾಗತಿಕ ಮಟ್ಟದ ಬೆಳವಣಿಗೆ ಕುರಿತು ಕೆಲವೇ ಮಂದಿ ನಡುವೆ ಚರ್ಚೆ ನಡೆಯುವ ಬದಲು ದೊಡ್ಡ ವೇದಿಕೆಯ ಮೇಲೆ, ವಿಶಾಲವಾದ ಕಾರ್ಯಸೂಚಿಯಲ್ಲಿ ಚರ್ಚೆಯಾಗಬೇಕು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು, ಬೆಳವಣಿಗೆಯ ಮಾದರಿಗಳು ಮನುಷ್ಯ ಕೇಂದ್ರಿತವಾಗಿರಬೇಕು ಎಂದು ಪ್ರತಿಪಾದಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ 6 ನೇ ‘ಇಂಡೋ-ಜಪಾನ್ ಸಂವಾದ್' ಸಮ್ಮೇಳನ ಉದ್ಧೇಶಿಸಿ ಅವರು ಮಾತನಾಡಿದ ಅವರು, ‘ಸಾಮ್ರಾಜ್ಯಶಾಹಿಯಿಂದ ಹಿಡಿದು ವಿಶ್ವ ಯುದ್ಧಗಳವರೆಗೆ, ಶಸ್ತ್ರಾಸ್ತ್ರ ದಿಂದ ಬಾಹ್ಯಾಕಾಶ ಕ್ಷೇತ್ರದ ಸ್ಪರ್ಧೆಯವರೆಗೆ ಎಲ್ಲ ಹಂತಗಳಲ್ಲೂ ಮಾತುಕತೆಗಳ ಮೂಲಕ ಬೆಳವಣಿಗೆ ಕಂಡಿದ್ದೇವೆ. ಈ ಎಲ್ಲ ಮಾತುಕತೆಗಳು ಒಬ್ಬರು ಮತ್ತೊಬ್ಬರನ್ನು ಹಿಂದಕ್ಕೆ ಎಳೆಯುವ ಗುರಿ ಹೊಂದಿದ್ದವು. ಆದರೆ, ಇನ್ನು ಮುಂದೆ ನಾವೆಲ್ಲ ಒಟ್ಟಾಗಿ ಸಹಯೋಗದಿಂದ ಬೆಳವಣಿಗೆಯತ್ತ ಹೆಜ್ಜೆ ಹಾಕೋಣ' ಎಂದು ಹೇಳಿದರು.

‘ದೇಶಗಳ ಪ್ರಮುಖ ನೀತಿಯಲ್ಲಿ ಮಾನವೀಯತೆ ಒಳಗೊಂಡಿರಬೇಕು' ಎಂದು ಕರೆ ನೀಡಿದ ಮೋದಿಯವರು,‘ನಾವು ನಮ್ಮ ಅಸ್ತಿತ್ವದ ಜತೆಗೆ ಪ್ರಕೃತಿಯೊಂದಿಗೆ ಸಾಮರಸ್ಯದ ಸಹಬಾಳ್ವೆ ಮಾಡಬೇಕು' ಎಂದು ಹೇಳಿದರು.

ADVERTISEMENT

ಇದೇ ವೇಳೆ ಬೌದ್ಧ ಸಾಹಿತ್ಯ ಮತ್ತು ಧರ್ಮಗ್ರಂಥಗಳಿಗೆ ಮೀಸಲಾಗಿರುವ ಗ್ರಂಥಾಲಯ ರಚಿಸುವ ಕುರಿತು ಪ್ರಸ್ತಾಪಿಸಿದ ಪ್ರಧಾನಿಯವರು ‘ಭಾರತದಲ್ಲಿ ಗ್ರಂಥಾಲಯದಂತಹ ಸೌಲಭ್ಯಗಳನ್ನು ಒದಗಿಸಲು ಸಂತೋಷಪಡುತ್ತೇವೆ ಮತ್ತು ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಕಲ್ಪಿಸುತ್ತೇವೆ' ಎಂದರು. ನಂತರ ‘ಈ ಗ್ರಂಥಾಲಯಕ್ಕೆ ಬೇಕಾದ ಎಲ್ಲ ಬೌದ್ಧ ಸಾಹಿತ್ಯದ ಡಿಜಿಟಲ್ ಪ್ರತಿಗಳನ್ನು ವಿವಿಧ ದೇಶಗಳಿಂದ ಸಂಗ್ರಹಿಸಲಾಗುತ್ತದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.