ದಿಶಾ ಪಟಾನಿ
ಬೆಂಗಳೂರು: ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿನ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಹೊರಗೆ ಇತ್ತೀಚೆಗೆ ನಡೆದಿದ್ದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಇಬ್ಬರು ಆರೋಪಿಗಳು ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದರು.
ಪೊಲೀಸರ ಕ್ರಮವನ್ನು ಸ್ವಾಗತಿಸಿರುವ ದಿಶಾ ಪಟಾನಿ ಅವರ ತಂದೆ ಮಾಜಿ ಸೇನಾಧಿಕಾರಿ ಜಗದೀಶ್ ಪಟಾನಿ ಅವರು ಕ್ರಿಮಿನಲ್‌ಗಳನ್ನು ಉತ್ತರ ಪ್ರದೇಶ ಸರ್ಕಾರ ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಿಎಂ ಯೋಗಿ ಅವರು ನೀಡಿದ್ದಾರೆ ಎಂದು ಹೇಳಿದ್ದಾರೆ.
ಅನವಶ್ಯಕವಾಗಿ ನಮ್ಮ ಮೇಲೆ ದಾಳಿ ಮಾಡಲು ಬಂದವರಿಗೆ ತಕ್ಕ ಶಾಸ್ತಿ ಆಗಿದೆ. ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಮುಂದಾದಾಗ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಸಮಾಜಘಾತುಕರಿಗೆ ಇದೊಂದು ಎಚ್ಚರಿಕೆ ಎಂದು ಅವರು ಎನ್‌ಕೌಂಟರ್ ಅನ್ನು ಸಮರ್ಥಿಸಿಕೊಂಡಿದ್ದಾರೆ.
ಹರಿಯಾಣದ ರೋಹ್ಟಕ್ ನಿವಾಸಿ ರವೀಂದರ್ ಮತ್ತು ಹರಿಯಾಣದ ಸೋನಿಪತ್‌ನ ಅರುಣ್ ಮೃತಪಟ್ಟವರು. ಅವರು ರೋಹಿತ್ ಗೋದಾರ–ಗೋಲ್ಡಿ ಬ್ರಾರ್‌ನ ಗ್ಯಾಂಗ್‌ಸ್ಟರ್ ಗುಂಪಿನ ಸಕ್ರಿಯ ಸದಸ್ಯರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.
ಗಾಜಿಯಾಬಾದ್‌ನ ಟ್ರೊನಿಕಾ ಸಿಟಿ ಬಳಿ ದೆಹಲಿ ಪೊಲೀಸ್ ವಿಶೇಷ ಘಟಕ, ಉತ್ತರ ಪ್ರದೇಶ ಮತ್ತು ಹರಿಯಾಣದ ವಿಶೇಷ ಕಾರ್ಯಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಈ ಎನ್‌ಕೌಂಟರ್ ನಡೆಸಿವೆ. ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.