ADVERTISEMENT

ದಿಶಾ ಸಾಲಿಯಾನ್‌ ಸಾವು ಪ್ರಕರಣ: ಸಚಿವ ನಾರಾಯಣ ರಾಣೆ ವಿರುದ್ಧ ಕ್ರಮಕ್ಕೆ ಆಗ್ರಹ

ಪಿಟಿಐ
Published 27 ಫೆಬ್ರುವರಿ 2022, 14:41 IST
Last Updated 27 ಫೆಬ್ರುವರಿ 2022, 14:41 IST
ದಿಶಾ ಸಾಲಿಯಾನ್‌
ದಿಶಾ ಸಾಲಿಯಾನ್‌   

ಮುಂಬೈ (ಪಿಟಿಐ): ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್‌ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಅವರ ಪುತ್ರ ಶಾಸಕ ನಿತೇಶ್‌ ರಾಣೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ (ಎಂಎಸ್‌ಸಿಡಬ್ಲ್ಯೂ) ಭಾನುವಾರ ಆಗ್ರಹಿಸಿದೆ.

ಅಲ್ಲದೆ ದಿಶಾ ಅವರ ಸಾವಿಗೆ ಸಂಬಂಧಿಸಿ ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ನಿರ್ಬಂಧಿಸಬೇಕು ಎಂದೂ ಮನವಿ ಮಾಡಿದೆ.

2020ರ ಜೂನ್‌ನಲ್ಲಿ ದಿಶಾ (28) ಅವರ ಸಾವಿನ ಸಂದರ್ಭದ ಸುತ್ತ ಇದ್ದ ಸನ್ನಿವೇಶಗಳ ಬಗ್ಗೆ ಬಿಜೆಪಿ ಮುಖಂಡ ನಾರಾಯಣ ರಾಣೆ ಅವರನ್ನು ಪ್ರಶ್ನಿಸಲಾಗಿತ್ತು.

ADVERTISEMENT

ಸಾಲಿಯಾನ್‌ ಅವರ ಮೇಲೆ ಅತ್ಯಾಚಾರ ನಡೆದಿಲ್ಲ ಮತ್ತು ಅವರು ಗರ್ಭಿಣಿ ಆಗಿರಲಿಲ್ಲ ಎಂದು ಅವರ ಮರಣೋತ್ತರ ಪರೀಕ್ಷೆಯ ವರದಿಯು ಉಲ್ಲೇಖಿಸಿರುವುದಾಗಿ ಮುಂಬೈನಲ್ಲಿನ ಮಾಲ್ವಾನಿ ಪೊಲೀಸರು ಆಯೋಗಕ್ಕೆ ಮಾಹಿತಿ ನೀಡಿರುವುದಾಗಿ ಎಂಎಸ್‌ಸಿಡಬ್ಲ್ಯೂ ಅಧ್ಯಕ್ಷೆ ರೂಪಾಲಿ ಚಕಂಕರ್‌ ಭಾನುವಾರ ಸರಣಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಮ್ಮ ಮಗಳ ಸಾವಿನ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ.ತಪ್ಪು ಮಾಹಿತಿಗಳನ್ನು ಹರಡುತ್ತಿರುವ ಸಚಿವ ನಾರಾಯಣ ರಾಣೆ, ಶಾಸಕ ನಿತೇಶ್‌ ರಾಣೆ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಿಶಾ ಅವರ ಪೋಷಕರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

‘ರಾಣೆ ಅವರು ದಿಶಾ ಅವರ ಚಾರಿತ್ರ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿರುವುದಾಗಿ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿ ಆರೋಪಿಸಿದ್ದಾರೆ.

ದಿಶಾ ಪ್ರಕರಣಕ್ಕೆ ಸಂಬಂಧಿಸಿ ವರದಿಯನ್ನು ನೀಡಬೇಕು. ತಪ್ಪು ಮಾಹಿತಿ ಹರಡುತ್ತಿರುವ ಸಚಿವ ನಾರಾಯಣ ರಾಣೆ, ಶಾಸಕ ನಿತೇಶ್‌ ರಾಣೆ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗ ಒತ್ತಾಯಿಸಿರುವುದಾಗಿ ರೂಪಾಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.