ADVERTISEMENT

ಮಣಿಪುರ | ಡ್ರಗ್ಸ್ ಹಣ ಹಂಚಿಕೆ ವಿವಾದವೇ ಗುಂಡಿನ ದಾಳಿಗೆ ಕಾರಣ: ಅಧಿಕಾರಿಗಳು

ಪಿಟಿಐ
Published 2 ಜನವರಿ 2024, 14:47 IST
Last Updated 2 ಜನವರಿ 2024, 14:47 IST
<div class="paragraphs"><p>ಮಣಿಪುರದ ಇಂಫಾಲದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾದ ಗಾಯಾಳುಗಳ ಆರೋಗ್ಯವನ್ನು ಮುಖ್ಯಮಂತ್ರಿ&nbsp;ಎನ್. ಬಿರೇನ್ ಸಿಂಗ್ ವಿಚಾರಿಸಿದರು</p></div>

ಮಣಿಪುರದ ಇಂಫಾಲದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾದ ಗಾಯಾಳುಗಳ ಆರೋಗ್ಯವನ್ನು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ವಿಚಾರಿಸಿದರು

   

ಪಿಟಿಐ

ಇಂಫಾಲ್‌: ಮಣಿಪುರದ ತೌಬಾಲ್‌ ಜಿಲ್ಲೆಯಲ್ಲಿ ಸೋಮವಾರ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಇದಕ್ಕೆ ಮಾದಕದ್ರವ್ಯ ಕಳ್ಳಸಾಗಣೆಯಿಂದ ಬಂದ ಹಣದ ಹಂಚಿಕೆ ವಿವಾದವೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಅಲ್ಪಸಂಖ್ಯಾತರೇ ಹೆಚ್ಚು ಇರುವ ಲಿಲಾಂಗ್‌ ಚಿಗ್‌ಜಾವೊ ವಲಯದಲ್ಲಿ ಗುರುತು ಸಿಗದಂತೆ ವೇಷ ಧರಿಸಿದ್ದವರು ಸ್ಥಳೀಯರನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ಇವರನ್ನು ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಸದಸ್ಯರು ಎಂದೆನ್ನಲಾಗಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಗಾಯಗೊಂಡ ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ಇಂಫಾಲದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಗಾಯಗೊಂಡ ಇತರ ಹತ್ತು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆ ಕುರಿತು ಅಧಿಕಾರಿಗಳ ಮಾಹಿತಿ

ಮಾದಕ ದ್ರವ್ಯ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಯ ಮನೆಗೆ ಪಿಎಲ್‌ಎ ಸದಸ್ಯರು ಬಂದಿದ್ದರು. ಈ ಸಂದರ್ಭದಲ್ಲಿ ಸುಮಾರು ಒಂದು ಸಾವಿರ ಜನರು ಆ ವ್ಯಕ್ತಿಯ ಮನೆ ಎದುರು ಸೇರಿದ್ದರು. ಈ ಸಂದರ್ಭದಲ್ಲಿ ಪಿಎಲ್ಎ ಸಂಘಟನೆಯ ಬಂದೂಕುದಾರಿಗಳು ನೆರೆದಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪಿಎಲ್‌ಎ ಸಂಘಟನೆಯ ರಾಜಕೀಯ ಘಟಕವಾದ ರೆವಲೂಷನರಿ ಪೀಪಲ್ಸ್ ಫ್ರಂಟ್ (ಆರ್‌ಪಿಎಫ್‌) ಹೇಳಿಕೆ ಬಿಡುಗಡೆ ಮಾಡಿದ್ದು, ಬಂದೂಕುದಾರಿಗಳು ತಮ್ಮ ಸಂಘಟನೆಗೆ ಸೇರಿದವರು. ಘಟನೆ ಕುರಿತು ಆಂತರಿಕ ತನಿಖೆ ನಡೆಸಲಾಗುವುದು ಎಂದಿದೆ. ಈ ಎರಡೂ ಸಂಘಟನೆಗಳ ಮೇಲೆ ಸರ್ಕಾರ ನಿಷೇಧ ಹೇರಿದೆ.

ಘಟನೆ ನಂತರ ನಾಗರಿಕರೊಂದಿಗೆ ಮತ್ತು ಸ್ಥಳೀಯ ಮುಖಂಡರೊಂದಿಗೆ ಪೊಲೀಸರು ಸಭೆ ನಡೆಸಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕರೂ ಪಾಲ್ಗೊಂಡಿದ್ದರು.

‘ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ, ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು’ ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಜನರಿಗೆ ಭರವಸೆ ನೀಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಬಿರೇನ್ ಸಿಂಗ್, ಗಾಯಾಳುಗಳ ಆರೋಗ್ಯ ವಿಚಾರಿಸಿದರು. 

‘ಪ್ರಕರಣ ಕುರಿತು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು. ಮೃತ ಕುಟುಂಬಗಳಿಗೆ ₹20ಲಕ್ಷ ಮತ್ತು ಗಾಯಗೊಂಡವರಿಗೆ ₹2ಲಕ್ಷ ಪರಿಹಾರ ನೀಡಬೇಕು’ ಎಂದು ಸ್ಥಳೀಯರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ಘಟನೆ ನಂತರ ಇಫಾಲ್ ಕಣಿವೆಯ ಐದು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.