ADVERTISEMENT

ರಾಜಸ್ಥಾನ: ಸಿಎಲ್‌‍ಪಿಗೆ ಗೈರು ಹಾಜರಾದ 19 ಶಾಸಕರಿಗೆ ನೋಟಿಸ್‌

ಪಿಟಿಐ
Published 15 ಜುಲೈ 2020, 8:12 IST
Last Updated 15 ಜುಲೈ 2020, 8:12 IST
ಸಚಿನ್‌ ಪೈಲಟ್
ಸಚಿನ್‌ ಪೈಲಟ್   

ಜೈಪುರ : ಸೋಮವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಸಚಿನ್‌ ಪೈಲಟ್‌ ಮತ್ತು ಅವರ ಬೆಂಬಲಿಗರಾದ 18 ಮಂದಿ ಶಾಸಕರನ್ನು ಅನರ್ಹಗೊಳಿಸುವ ಸಂಬಂಧ ಕಾರಣ ಕೇಳಿ ವಿಧಾನಸಭೆಯ ಸ್ಪೀಕರ್‌ ಸಿ.ಪಿ.ಜೋಷಿ ಷೋಕಾಸ್‌ ನೋಟಿಸ್‌ ನೀಡಿದ್ದು, ಶುಕ್ರವಾರದ ಒಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಬಂಡಾಯ ಎದ್ದಿರುವ ಪೈಲಟ್‌ ಅವರನ್ನು ಈಗಾಗಲೇ ಉಪಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಞ ಸ್ಥಾನದಿಂದ ವಜಾಗೊಳಿಸಲಾಗಿದೆ. ಅಲ್ಲದೆ ಅವರ ಪರವಾಗಿ ಇದ್ದ ವಿಶ್ವೇಂದ್ರ ಸಿಂಗ್‌ ಮತ್ತು ರಮೇಶ್‌ ಮೀನಾ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ.

ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಪಕ್ಷದ ಮುಖ್ಯಸಚೇತಕ ಮಹೇಶ್‌ ಜೋಷಿ ಅವರು ಸ್ಪೀಕರ್‌ಗೆ ಪತ್ರ ಬರೆದಿದ್ದರು. ಇದಾದ ಬಳಿಕ ಮಂಗಳವಾರವೇ ಸ್ಪೀಕರ್‌ ಅವರು ನೋಟಿಸ್‌ ನೀಡಿದ್ದಾರೆ. ಅವರನ್ನು ಅನರ್ಹಗೊಳಿಸುವಂತೆ ಪಕ್ಷವು ಸ್ಪೀಕರ್‌ ಅವರಿಗೆ ಮನವಿ ಮಾಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್‌ ಪಾಂಡೆ ತಿಳಿಸಿದರು.

ADVERTISEMENT

ಒಟ್ಟು 19 ಮಂದಿ ಶಾಸಕರು ಗೈರು ಹಾಜರಾಗಿದ್ದರು. ಸ್ಪೀಕರ್‌ ನೀಡುವ ನೋಟಿಸ್‌ಗೆ ಅವರು ಉತ್ತರ ನೀಡಬೇಕಾಗಿದ್ದು, ಅಂತಿಮವಾಗಿ ಸ್ಪೀಕರ್‌ ಅವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಬಾಗಿಲು ಮುಚ್ಚಿಲ್ಲ: ಸಚಿನ್‌ ಪೈಲಟ್‌ ಮತ್ತು ಅವರ ಬೆಂಬಲಿಗರಿಗೆ ಪಕ್ಷದ ಬಾಗಿಲು ಮುಚ್ಚಿಲ್ಲ ಎಂದು ಅವಿನಾಶ್‌ ಪಾಂಡೆ ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪೈಲಟ್‌ ಅವರು ಶಕ್ತಿಮೀರಿ ಶ್ರಮಿಸಿದ್ದಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿ, ಬಿಜೆಪಿ ಬೀಸಿರುವ ಗಾಳಕ್ಕೆ ಬೀಳದಂತೆ ದೇವರು ಒಳ್ಳೆಯ ಬುದ್ದಿಯನ್ನು ನೀಡಲು ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಟ್ವಿಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.