ADVERTISEMENT

ಜೈಲಿನಲ್ಲಿ ನೆರವಾದವರಿಗೆ ಡಿಕೆಶಿ ಸಹಾಯಹಸ್ತ

ತಿಹಾರ್‌ನಲ್ಲಿ ಆಪ್ತರಾದ ಇಬ್ಬರಿಗೆ ನೌಕರಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 21:34 IST
Last Updated 21 ಜೂನ್ 2021, 21:34 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ನವದೆಹಲಿ: ಜಾರಿ ನಿರ್ದೇಶನಾಲಯ (ಇ.ಡಿ)ದಿಂದ 2019ರ ಸೆಪ್ಟೆಂಬರ್‌ನಲ್ಲಿ ಬಂಧನಕ್ಕೊಳಗಾಗಿ, ಇಲ್ಲಿನ ತಿಹಾರ್‌ ಜೈಲಿನಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರಾಗೃಹ ವಾಸದಲ್ಲಿ ಆಪ್ತರಾಗಿದ್ದ ಇಬ್ಬರಿಗೆ ನೆರವಾಗಿದ್ದಾರೆ.

ಕೌಟುಂಬಿಕ ಸಮಸ್ಯೆಯಿಂದಾಗಿ ಪತ್ನಿಯರಿಂದ ವಿಚ್ಛೇದನ ಪಡೆದಾಗ ಪರಿಹಾರ ನೀಡಲು ವಿಫಲವಾಗಿದ್ದ ದೆಹಲಿ ಮೂಲದ ಇಬ್ಬರಿಗೆ ಹಣಕಾಸಿನ ನೆರವು ನೀಡಿ ಜೈಲಿನಿಂದ ಬಿಡುಗಡೆಯಾಗಲು ಕಾರಣರಾದ ಶಿವಕುಮಾರ್‌, ಅವರಿಬ್ಬರಿಗೂ ನೌಕರಿಯನ್ನೂ ನೀಡಿದ್ದಾರೆ.

ಗೋಡೆಗೆ ಬಣ್ಣ ಬಳಿಯುವ ಕೆಲಸ ಮಾಡಿಕೊಂಡಿದ್ದ ದೆಹಲಿಯ ಮೊಹಿಸಿನ್‌ ರಝಾ ಕಾರಾಗೃಹದಲ್ಲಿ ಶಿವಕುಮಾರ್‌ ಅವರ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಟ್ಟು ಆಪ್ತರಾಗಿದ್ದರೆ, ಇನ್ನೊಬ್ಬರು 42 ದಿನಗಳ ಹಿಂದಿ ಕಲಿಸಿ ಸ್ನೇಹ ಸಂಪಾದಿಸಿದ್ದರು.

ADVERTISEMENT

‘ತಿಹಾರ್‌ ಜೈಲಿನ 7ನೇ ನಂಬರ್‌ನ ಬ್ಯಾರಕ್‌ಗೆ ತೆರಳಿದ್ದ ನನಗೆ ಮೊದಲು ಮೊಹಿಸಿನ್‌ ಪರಿಚಿತನಾದ. ನನ್ನನ್ನು ಇರಿಸಿದ್ದ ಸೆಲ್‌ನಲ್ಲೇ ಇದ್ದ ಆತ ನನ್ನ ಬಟ್ಟೆ, ಪಾತ್ರೆ, ಸ್ವಚ್ಛಗೊಳಿಸಿ ಕೊಡುತ್ತಿದ್ದುದಲ್ಲದೆ, ಕುಡಿಯಲು ನೀರು,
ಚಹಾ ತಂದು ಕೊಡುತ್ತ ಸೇವೆ ಮಾಡಿದ. ಇನ್ನೊಬ್ಬ ಪದವೀಧರ ನನಗೆ ಸ್ವಲ್ಪ ಹಿಂದಿ ಕಲಿಸಿದ. ಜಾಮೀನು ಪಡೆದು ಹೊರ ಬಂದ ಕೆಲವು ದಿನಗಳ ನಂತರ ಇಬ್ಬರಿಗೂ ತಲಾ ₹ 4.50 ಲಕ್ಷ ನೀಡಿ, ಅವರಿಗೆ ನೆರವು ನೀಡಿದೆ’ ಎಂದು ಸೋಮವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಡಿ.ಕೆ. ಶಿವಕುಮಾರ್‌ ವಿವರಿಸಿದರು.

‘ಮೊಹಿಸಿನ್‌ಗೆ ಸೋದರ ಡಿ.ಕೆ. ಸುರೇಶ್‌ ಅವರ ದೆಹಲಿ ನಿವಾಸದಲ್ಲಿ ಅಡುಗೆ, ಮತ್ತಿತರ ಉಸ್ತುವಾರಿ ಕೆಲಸ ವಹಿಸಲಾಗಿದೆ. ಇನ್ನೊಬ್ಬ ವ್ಯಕ್ತಿಗೆ ಬೆಂಗಳೂರಿನ ನಮ್ಮ ಸಂಸ್ಥೆಯಲ್ಲಿ ನೌಕರಿ ನೀಡಿದ್ದೇವೆ’ ಎಂದು ಅವರು ಹೇಳಿದರು.

‘ಜನ ಯಾವ್ಯಾವುದೋ ಕಾರಣದಿಂದ ಜೈಲು ಪಾಲಾಗಿರುತ್ತಾರೆ. ಕೆಲವರು ಘೋರ ಅಪರಾಧದಲ್ಲಿ ಭಾಗಿಯಾಗಿ ಜೈಲು ಸೇರಿದರೆ, ಇನ್ನು ಕೆಲವರು ದುಡ್ಡಿಲ್ಲ ಎಂಬಕಾರಣಕ್ಕೆ ಕಂಬಿ ಎಣಿಸುತ್ತಿರುತ್ತಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.