ADVERTISEMENT

ಡಿಎಂಕೆ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:00 IST
Last Updated 5 ಮಾರ್ಚ್ 2019, 19:00 IST
ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌
ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌   

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಎಂಟು ಪಕ್ಷಗಳ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮಗೊಂಡಿದೆ. ಡಿಎಂಕೆ 20 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕೆಡಿಎಂಕೆ, ಐಜೆಕೆ, ಎಂಡಿಎಂಕೆ ಮತ್ತು ವಿಸಿಕೆ ಪಕ್ಷಗಳ ಅಭ್ಯರ್ಥಿಗಳು ಡಿಎಂಕೆಯ ಚುನಾವಣಾ ಚಿಹ್ನೆಯಲ್ಲಿಯೇ ಸ್ಪರ್ಧಿಸಲು ಕೋರಲಾಗಿದೆ. ಈ ಪಕ್ಷಗಳು ಅದಕ್ಕೆ ಒಪ್ಪಿದರೆ ಡಿಎಂಕೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಬಹುದು.

ಕಾಂಗ್ರೆಸ್‌ ಪಕ್ಷಕ್ಕೆ 10, ಸಿಪಿಎಂ, ಸಿಪಿಐ ಮತ್ತು ವಿಸಿಕೆ ಪಕ್ಷಗಳಿಗೆ ತಲಾ ಎರಡು, ಎಂಡಿಎಂಕೆ, ಐಯುಎಂಎಲ್‌, ಐಜೆಕೆ ಮತ್ತು ಕೆಡಿಎಂಕೆ ಪಕ್ಷಗಳಿಗೆ ತಲಾ ಒಂದೊಂದು ಕ್ಷೇತ್ರಗಳನ್ನು ಬಿಟ್ಟುಕೊಡಲು ನಿರ್ಧರಿಸಲಾಗಿದೆ.

ಯಾವ ಕ್ಷೇತ್ರ ಯಾವ ಪಕ್ಷಕ್ಕೆ ಎಂಬ ವಿಚಾರದ ಬಗ್ಗೆ ಇನ್ನಷ್ಟೇ ಚರ್ಚೆ ಆಗಬೇಕಿದೆ. ಡಿಎಂಕೆ ಕೋಶಾಧಿಕಾರಿ ದೊರೆಮುರುಗನ್‌ ನೇತೃತ್ವದಲ್ಲಿ ಈ ಚರ್ಚೆ ಗುರುವಾರ ಆರಂಭ ಆಗಲಿದೆ. ಎಂಎಂಕೆ ಪಕ್ಷಕ್ಕೆ ಈ ಬಾರಿ ಯಾವುದೇ ಕ್ಷೇತ್ರ ನೀಡದಿರಲು ನಿರ್ಧರಿಸಲಾಗಿದೆ. ಆದರೆ, ಚುನಾವಣೆಯಲ್ಲಿ ಆ ಪಕ್ಷದ ಬೆಂಬಲ ಕೋರಲಾಗಿದೆ.

ಇದೇ 13ರಂದು ಭಾರಿ ಸಮಾವೇಶ ನಡೆಯಲಿದೆ. ಅದರಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾಗವಹಿಸಲಿದ್ದಾರೆ.

ಎಐಎಡಿಎಂಕೆ, ಬಿಜೆಪಿ, ಪಿಎಂಕೆ ಮತ್ತು ಇತರ ಕೆಲವು ಪಕ್ಷಗಳು ಸೇರಿ ಮೈತ್ರಿಕೂಟ ರಚಿಸಿಕೊಂಡಿವೆ. ಹಾಗಾಗಿ, ಎರಡು ಮೈತ್ರಿಕೂಟಗಳ ನಡುವೆ ಸ್ಪರ್ಧೆ ಕಠಿಣಗೊಂಡಿದೆ. ಆದ್ದರಿಂದ ಮಿತ್ರಪಕ್ಷಗಳಿಗೆ ಕ್ಷೇತ್ರಗಳನ್ನು ಬಿಟ್ಟುಕೊಡುವ ವಿಚಾರದಲ್ಲಿ ಡಿಎಂಕೆ ಹೆಚ್ಚು ಉದಾರವಾಗಿ ನಡೆದುಕೊಂಡಿದೆ ಎನ್ನಲಾಗಿದೆ. ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಡಿಎಂಕೆ ಘೋಷಿಸಿದೆ. ಕೇಂದ್ರದ ಬಿಜೆಪಿ ಮತ್ತು ತಮಿಳುನಾಡಿನ ಎಐಎಡಿಎಂಕೆ ಸರ್ಕಾರಗಳ ಮೇಲಿನ ಆಡಳಿತವಿರೋಧಿ ಅಲೆಯನ್ನು ಡಿಎಂಕೆ ಪರವಾಗಿ ತಿರುಗಿಸುವುದು ಇದರ ಉದ್ದೇಶ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.