ದೆಹಲಿ ಮೆಟ್ರೊದಲ್ಲಿ ಅತ್ಯಾಚಾರ ಅಪರಾಧಿ ಅಸಾರಾಂ ಬಾಪು ಜಾಹೀರಾತು ಪ್ರದರ್ಶನ
ಬೆಂಗಳೂರು: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಆಶೀರ್ವಾದದೊಂದಿಗೆ ಫೆಬ್ರುವರಿ 14ರ ವ್ಯಾಲಿಂಟಿನ್ ಡೇ ಬದಲು ‘ತಂದೆ–ತಾಯಿಯರಿಗೆ ಪೂಜೆಯ ದಿನ’ ಆಚರಣೆ ಎಂಬ ಖಾಸಗಿ ಜಾಹೀರಾತು ದೆಹಲಿ ಮೆಟ್ರೊದಲ್ಲಿ ಪ್ರದರ್ಶನವಾಗಿದ್ದನ್ನು ಹಲವರು ವಿರೋಧಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡು ದೆಹಲಿ ಮೆಟ್ರೊದ ವಿರುದ್ಧ ಹಲವರು ಕಿಡಿಕಾರಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯ ಚಿತ್ರವನ್ನು ಜಾಹೀರಾತಿನ ಮೂಲಕ ಮೆಟ್ರೊದಲ್ಲಿ ಬಿತ್ತರಿಸುವ ಮೂಲಕ ಯಾವ ಸಂದೇಶ ನೀಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮೆಟ್ರೊ, ನಮ್ಮಿಂದ ಲೋಪವಾಗಿದೆ. ಕೂಡಲೇ ಎಲ್ಲ ರೈಲುಗಳಲ್ಲಿ ಈ ವಿವಾದಿತ ಜಾಹೀರಾತನ್ನು ತೆಗೆದುಹಾಕಲು ಆದೇಶಿಸಲಾಗಿದೆ. ಮುಂದೆ ಹೀಗಾಗದಂತೆ ಎಚ್ಚರವಹಿಸಲಾಗುವುದು ಎಂದು ಹೇಳಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರು, ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು.
86 ವರ್ಷದ ಅಸಾರಾಂ ಅವರು ಅಪರಾಧಿ ಎಂದು ಗುಜರಾತ್‌ನ ನ್ಯಾಯಾಲಯ 2023ರ ಜನವರಿಯಲ್ಲಿ ತೀರ್ಪು ನೀಡಿತ್ತು. ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಇದೇ ವರ್ಷದ ಆಗಸ್ಟ್‌ನಲ್ಲಿ ತಿರಸ್ಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.