ADVERTISEMENT

ರಾಮಮಂದಿರ ನಿರ್ಮಾಣ: ₹ 22 ಕೋಟಿ ಮೌಲ್ಯದ ಚೆಕ್‌ಗಳು ಬೌನ್ಸ್‌

₹ 5,400 ಕೋಟಿ ದಾಟಿದ ಒಟ್ಟು ದೇಣಿಗೆಯ ಮೊತ್ತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 14:29 IST
Last Updated 20 ಜೂನ್ 2022, 14:29 IST
ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಮಾದರಿ –ಪಿಟಿಐ ಚಿತ್ರ
ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಮಾದರಿ –ಪಿಟಿಐ ಚಿತ್ರ   

ಲಖನೌ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿದ್ದ ₹22 ಕೋಟಿ ಮೌಲ್ಯದ ಚೆಕ್‌ಗಳು ಬೌನ್ಸ್ ಅಗಿದ್ದು, ನಿರ್ಮಾಣ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ಗೆ ಇದುವರೆಗೆ ₹5,400 ಕೋಟಿಗೂ ಹೆಚ್ಚು ದೇಣಿಗೆ ಬಂದಿದೆ.

‘ಕಳೆದ ವರ್ಷ ಜನವರಿ ಮತ್ತು ಮಾರ್ಚ್ ನಡುವೆ ಆರಂಭವಾದ ಮೂರು ತಿಂಗಳ ದೇಣಿಗೆಯ ಅಭಿಯಾನದಲ್ಲಿಯೇ ₹ 3,500 ಕೋಟಿ ಮೊತ್ತದ ದೇಣಿಗೆಯನ್ನು ಸ್ವೀಕರಿಸಲಾಗಿದೆ’ ಎಂದು ಟ್ರಸ್ಟ್‌ನ ಪದಾಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

‘ಸುಮಾರು 1,500 ಚೆಕ್‌ಗಳು ತಾಂತ್ರಿಕ ಕಾರಣಗಳಿಂದಾಗಿ ಬೌನ್ಸ್ ಆಗಿವೆ. ಈ ಚೆಕ್‌ಗಳನ್ನು ನೀಡಿದ್ದವರಲ್ಲಿ ಬಹುತೇಕರು ನಮ್ಮನ್ನು ಸಂಪರ್ಕಿಸಿದ್ದು, ಹೊಸದಾಗಿ ದೇಣಿಗೆ ನೀಡುವುದಾಗಿ ಹೇಳಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ನ ಪದಾಧಿಕಾರಿಗಳ ಪ್ರಕಾರ, 2024ರ ಜನವರಿ 24ರಂದು ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಮಂದಿರದ ಸಂಪೂರ್ಣ ಸಂಕೀರ್ಣವನ್ನು 2025ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೇ ತಿಂಗಳ ಆರಂಭದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಿಜೆಪಿ 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ರಾಮ ಮಂದಿರ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಬಯಸಿವೆ. 2020ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು.

ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ನೇತೃತ್ವದ ಸರ್ಕಾರವು ಮತ್ತೆ ಅಧಿಕಾರದ ಗದ್ದುಗೆ ಏರುವ ಸಲುವಾಗಿ, ಭಕ್ತರಿಗಾಗಿ ರಾಮ ಮಂದಿರವು ಲೋಕಾರ್ಪಣೆಯಾಗುವ ವಿಷಯವು ಪ್ರಾಮುಖ್ಯತೆ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.