ADVERTISEMENT

ಸಿಖ್‌ ಧರ್ಮದವರ ಟರ್ಬನ್‌ –ಹಿಜಾಬ್‌ಗೆ ಹೋಲಿಕೆ ಸಲ್ಲ: ಸುಪ್ರೀಂ ಕೋರ್ಟ್‌

ಹಿಜಾಬ್‌ ನಿಷೇಧ ಆದೇಶ: ಮೇಲ್ಮನವಿಗಳ ವಿಚಾರಣೆ ಮುಂದುವರಿಸಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 19:47 IST
Last Updated 8 ಸೆಪ್ಟೆಂಬರ್ 2022, 19:47 IST
   

ನವದೆಹಲಿ: ಬೀದಿಯಲ್ಲಿ ಹಿಜಾಬ್‌ ಧರಿಸುವುದು ಯಾರಿಗೂ ತೊಂದರೆ ಮಾಡದೆ ಇರಬಹುದು. ಆದರೆ, ಶಾಲೆಗಳಲ್ಲಿ ಹಿಜಾಬ್‌ ಧರಿಸುವುದರಿಂದ ಸಾರ್ವಜನಿಕ ನಿಯಮಗಳ ಕುರಿತು ಪ್ರಶ್ನೆ ಹುಟ್ಟು ಹಾಕಬಹುದು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ನಂತರ ಸುಪ್ರೀಂಕೋರ್ಟ್, ‘ಸಿಖ್‌ ಧರ್ಮದವರ ಟರ್ಬನ್‌ ಹಾಗೂ ಹಿಜಾಬ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ. ಟರ್ಬನ್‌ ಧರಿಸುವ ಪದ್ಧತಿ ಭಾರತೀಯ ಸಂಸ್ಕೃತಿಯಲ್ಲಿ ಬೆರೆತು ಹೋಗಿದ್ದು, ಅದರ ಸಿಂಧುತ್ಚವನ್ನು ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಕೂಡ ಅಂಗೀಕರಿಸಿದೆ’ ಎಂದಿತು.

ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಗುರುವಾರ ಮುಂದುವರಿಸಿದ ನ್ಯಾಯ ಮೂರ್ತಿಗಳಾದ ಹೇಮಂತ್‌ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ, ಹಿಜಾಬ್‌ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌ನ ಮಾರ್ಚ್‌ 15ರ ಆದೇಶವು ಇಸ್ಲಾಂ ಧರ್ಮ ನಿಂದನೆಯ ಉದ್ದೇಶವನ್ನು ಹೊಂದಿದೆ ಎಂಬ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿತು.

ADVERTISEMENT

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ನಿಜಾಮುದ್ದೀನ್‌ ಪಾಷಾ, ‘ತಲೆಕೂದಲು ಬೆಳೆಸುವುದು ಮತ್ತು ಟರ್ಬನ್‌ ಧರಿಸುವುದು ಸಿಖ್‌ ಧರ್ಮದ ಐದು ನಂಬಿಕೆಗಳಲ್ಲಿ ಒಂದು. ಖುರಾನ್‌ನಲ್ಲಿ ಅಲ್ಲಾಹ್‌ ಹೇಳಿರುವ ಮಾತುಗಳನ್ನು ಪಾಲಿಸುವುದು ಕೂಡಾ ಇಸ್ಲಾಂ ಧರ್ಮದ ಐದು ನಂಬಿಕೆಗಳಲ್ಲಿ ಒಂದಾಗಿದೆ’ ಎಂದರು.

ಸಮವಸ್ತ್ರದ್ದೇ ಬಣ್ಣದ ಹಿಜಾಬ್‌ ಧರಿಸುವುದರಿಂದ ಶಿಸ್ತಿನ ಉಲ್ಲಂಘನೆ ಆಗುವುದಿಲ್ಲ ಎಂದೂ ಅವರು ವಾದಿಸಿದರು.

ಇದನ್ನು ಒಪ್ಪದ ನ್ಯಾಯಪೀಠ,ಸಿಖ್‌ ಧರ್ಮದ ಐದು ನಿಯಮಗಳ ಪಾಲನೆ ಕಡ್ಡಾಯವಾಗಿದ್ದು ಐವರು ಸದಸ್ಯರ ಪೀಠ ಕೂಡಾ ಸಿಖ್ಖರಿಗೆ ಟರ್ಬನ್‌ ಮತ್ತು ಕಿರ್ಪನ್‌ ಧರಿಸುವುದು ಕಡ್ಡಾಯ ಎಂದು ತೀರ್ಪು ನೀಡಿದೆ. ಆದ್ದರಿಂದ ಈ ಪ್ರಕರಣವನ್ನು ಅದರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದಿತು.

ಆಗ ಪಾಷಾ, ಇಸ್ಲಾಂ ಧರ್ಮ 1400 ವರ್ಷಗಳಷ್ಟು ಹಳೆಯದ್ದು. ಅಂದಿನಿಂದ ಹಿಜಾಬ್‌ ಜಾರಿಯಲ್ಲಿದೆ. ಈಗ ಹೈಕೋರ್ಟ್‌ ಹಿಜಾಬ್‌ ಧರಿಸುವ ಕುರಿತು ತನ್ನಲ್ಲೇ ವ್ಯಾಖ್ಯಾನ ನೀಡಿ ಧರ್ಮ ನಿಂದನೆ ಮಾಡಿದೆ ಎಂದರು.

ಆಗ ನ್ಯಾಯಪೀಠ, ವಾದ ತನ್ನ ವ್ಯಾಪ್ತಿ ಮೀರಿ ಹೋಗುವುದು ಬೇಡ ಎಂದು ಎಚ್ಚರಿಸಿತು.

ಹಿಜಾಬ್‌ ಧರಿಸುವ ಹಕ್ಕು, ಸಂವಿಧಾನದ 29(1) ಪರಿಚ್ಛೇದದ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಅವರ ಸಂಸ್ಕೃತಿಯನ್ನು ಕಾಪಾಡುವ ಹಕ್ಕು ನೀಡುತ್ತದೆ. ಆದರೆ, ಈಗ ಶೈಕ್ಷಣಿಕ ಸಂಸ್ಥೆಗಳಿಗೆ ಹಿಜಾಬ್‌ ಧರಿಸಿದವರಿಗೆ ಪ್ರವೇಶ ನಿರಾಕರಿಸುವುದು 29ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ ಎಂದು ಪಾಷಾ ವಾದಿಸಿದರು.

ಹಿರಿಯ ವಕೀಲ ದೇವದತ್‌ ಕಾಮತ್‌ ಕೂಡ ಇದೇ ವಾದವನ್ನು ಪ್ರತಿಪಾದಿಸಿದರು. ‘ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ ಇತರ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುತ್ತಾರೆ ಎಂಬುದು ಕರ್ನಾಟಕ ಸರ್ಕಾರದ ವಾದ. ಕೇಸರಿ ಶಾಲು ಧರಿಸುವುದು ಧಾರ್ಮಿಕ ನಂಬಿಕೆಯಲ್ಲ. ಇದು ಕೇವಲ ಧರ್ಮವನ್ನು ಪ್ರದರ್ಶಿಸುವ ಸಂಕೇತವಾಗಿದೆ. ನೀವು ಇದನ್ನು ಧರಿಸಿದರೆ, ನಾವು ಇದನ್ನು ಧರಿಸುತ್ತೇವೆ ಎಂಬುದು ವಿತಂಡ ವಾದ’ ಎಂದು ಕಾಮತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.