ADVERTISEMENT

ನಾಗ್ಪುರವನ್ನು ಮಹಾರಾಷ್ಟ್ರದ ಮಣಿಪುರ ಮಾಡಬೇಡಿ: ಬಿಜೆಪಿ ವಿರುದ್ಧ ಠಾಕ್ರೆ ಗುಡುಗು

ಗಲಭೆ ಬಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2025, 3:13 IST
Last Updated 19 ಮಾರ್ಚ್ 2025, 3:13 IST
<div class="paragraphs"><p>ಅಮಿತ್ ಶಾ,&nbsp;ಉದ್ಧವ್ ಠಾಕ್ರೆ</p></div>

ಅಮಿತ್ ಶಾ, ಉದ್ಧವ್ ಠಾಕ್ರೆ

   

ಬೆಂಗಳೂರು: ಮಹಾರಾಷ್ಟ್ರದಲ್ಲಿ ಮೊಘಲ್‌ ದೊರೆ ಔರಂಗಜೇಬನ ಸಮಾಧಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆದ ಮರುದಿನವೇ ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ನಗರದ ಕೆಲವು ಭಾಗಗಳಲ್ಲಿ ಕರ್ಪ್ಯೂ ಜಾರಿ ಮಾಡಲಾಗಿದೆ. ಗಲಭೆಗೆ ಸಂಬಂಧಿಸಿದಂತೆ 80ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.

ಏತನ್ಮಧ್ಯೆ ಈ ಗಲಭೆ ಬಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಕೇಂದ್ರದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಬಯಸಿದರೆ ಮೊಘಲ್ ದೊರೆ ಔರಂಗಜೇಬನ ಸಮಾಧಿಯನ್ನು ಧ್ವಂಸ ಮಾಡಬಹುದು. ಹಾಗೆಯೇ ಈ ಕೆಲಸಕ್ಕೆ ಅವರು, ತಮ್ಮ ಸ್ನೇಹಿತರಾದ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರನ್ನು ಕರೆತರಬೇಕು ಎಂದು ಹೇಳಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಹಾಗೂ ಬಿಹಾರದಲ್ಲಿ ನಿತೀಶ್ ಕುಮಾರ್ ಮುಸ್ಲಿಂರ ಬೆಂಬಲದಿಂದಲೇ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಮೊಘಲ್ ದೊರೆ ಔರಂಗಜೇಬನ ಸಮಾಧಿಯನ್ನು ಒಡೆದು ಹಾಕಲು ಬಿಜೆಪಿಯ ತಮ್ಮ ಈ ಸ್ನೇಹಿತರನ್ನೂ ಕರೆತರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಎಂದೊ ಸುಮಾರು 300 ವರ್ಷಗಳ ಹಿಂದೆ ಆಡಳಿತ ನಡೆಸಿದ ಔರಂಗಜೇಬನ ಬಗ್ಗೆ ವಿವಾದ ಮಾಡುವುದು ಗಲಭೆ ಮಾಡುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.

'ಬಿಜೆಪಿ ನಾಯಕರೇ ನಾಗ್ಪುರವನ್ನು ಮಹಾರಾಷ್ಟ್ರದ ಮಣಿಪುರ ಮಾಡಬೇಡಿ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐದು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ನಾಗ್ಪುರ ಪೊಲೀಸ್‌ ಆಯುಕ್ತ ರವೀಂದ್ರ ಕುಮಾರ್‌ ಸಿಂಗಾಲ್‌ ತಿಳಿಸಿದ್ದಾರೆ.

ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬನ ಸಮಾಧಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ಸಮಾಧಿ ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಪ್ರತಿಭಟನೆಯಲ್ಲಿ ಸಮುದಾಯವೊಂದರ ಪವಿತ್ರ ಪುಸ್ತಕಕ್ಕೆ ಬೆಂಕಿ ಹಾಕಲಾಗಿದೆ ಎಂಬ ವದಂತಿ ಹರಡಿದ ನಂತರ ನಾಗ್ಪುರದ ಮಹಲ್‌ ಪ್ರದೇಶದ ಚಿಟನಿಸ್‌ ಪಾರ್ಕ್‌ನಲ್ಲಿ ಸೋಮವಾರ ಸಂಜೆ 7.30ರ ಸುಮಾರಿಗೆ ಹಿಂಸಾಚಾರ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.