ADVERTISEMENT

ಭೂಷಣ್‌ರನ್ನು ಶಿಕ್ಷಿಸಿ ಹುತಾತ್ಮರನ್ನಾಗಿಸುವುದು ಬೇಡ: ಸುಪ್ರೀಂಗೆ ವಕೀಲ ಮನವಿ

ಏಜೆನ್ಸೀಸ್
Published 25 ಆಗಸ್ಟ್ 2020, 12:02 IST
Last Updated 25 ಆಗಸ್ಟ್ 2020, 12:02 IST
   

ದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ‌ ಪ್ರಶಾಂತ್ ಭೂಷಣ್ ಅವರಿಗೆ ಶಿಕ್ಷೆ ವಿಧಿಸುವ ಬದಲು ಕ್ಷಮಾದಾನ ನೀಡುವಂತೆ, ಭೂಷಣ್‌ ಪರ ವಕೀಲ ರಾಜೀವ್‌ ಧವನ್‌ ಹಾಗೂ ಅಟಾರ್ನಿ ಜನರಲ್‌ ಕೆಕೆ ವೇಣುಗೋಪಾಲ್‌ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಷಣ್‌ ಅವರನ್ನು ಈಗಾಗಲೇ ದೋಷಿ ಎಂದು ಘೋಷಿಸಲಾಗಿದೆ. ಆದಾಗ್ಯೂತಾವು ನ್ಯಾಯಾಂಗದ ವಿರುದ್ಧ ಮಾಡಿರುವ ಟ್ವೀಟ್‌ಗಳ ಬಗೆಗಿನ ನಿಲುವನ್ನು ಮತ್ತೊಮ್ಮೆ ಪರಾಮರ್ಶಿಸುವಂತೆ ಇಂದು ಮಧ್ಯಾಹ್ನ 30 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಭೂಷಣ್‌ ತಮ್ಮಟ್ವೀಟ್‌ಗಳ ಬಗ್ಗೆ ಕ್ಷಮೆ ಯಾಚಿಸುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗುವುದು ಖಾತ‌್ರಿಯಾಗಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಬಿಆರ್‌ ಗವಿ ಮತ್ತು ಕೃಷ್ಣ ಮುರಾರಿ ನೇತೃತ್ವದ ಪೀಠ ಶಿಕ್ಷೆಯ ಆದೇಶವನ್ನು ಕಾಯ್ದಿರಿಸಿದೆ.

ADVERTISEMENT

ವಿಚಾರಣೆ ವೇಳೆ ಕೆಕೆ ವೇಣುಗೋಪಾಲ್‌ ಅವರು. ‘ಈ ಸಂಬಂಧ ಭೂಷಣ್‌ ಅವರಿಗೆ ಎಚ್ಚರಿಕೆ ನೀಡಿ, ಪ್ರಕರಣವನ್ನು ಕೈ ಬಿಡಬಹುದು. ಶಿಕ್ಷಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಮಿಶ್ರಾ, ‘ಭೂಷಣ್‌ ಅವರು ತಾವು ತಪ್ಪು ಮಾಡಿರುವುದರ ಬಗ್ಗೆ ಯೋಚಿಸುತ್ತಿಲ್ಲ. ಕ್ಷಮೆ ಯಾಚಿಸಿಲ್ಲ. ತಾವು ತಪ್ಪು ಮಾಡಿರುವುದುದನ್ನು ಒಪ್ಪಿಕೊಳ್ಳದಿದ್ದಾಗ ಏನು ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದರು.

ಈ ವೇಳೆ ರಾಜೀವ್‌ ಧವನ್‌ ಅವರು ಶಿಕ್ಷೆ ವಿಧಿಸುವ ಮೂಲಕ ಭೂಷಣ್‌ ಅವರನ್ನು ಹುತಾತ್ಮರನ್ನಾಗಿಸುವುದು ಬೇಡ ಎಂದು ಮನವಿ ಮಾಡಿದರು.

‘ಭೂಷಣ್‌ರನ್ನು ಹುತಾತ್ಮರನ್ನಾಗಿಸುವ ಅಥವಾ ನ್ಯಾಯಾಲಯದ ತೀರ್ಪನ್ನು ಶ್ಲಾಘಿಸುವ ಮೂಲಕ ನಾವು ವಿವಾದಗಳ ಸರಮಾಲೆ ಏಳುವುದನ್ನು ನಾವು ಬಯಸುವುದಿಲ್ಲ. ಈ ಪ್ರಕರಣ ಮತ್ತು ವಿವಾದಗಳು ಕೊನೆಯಾಗಬೇಕು. ಸಮರ್ಥ ನ್ಯಾಯಾಂಗದಿಂದ ಮಾತ್ರವೇ ಇದನ್ನು ಮಾಡಲು ಸಾಧ್ಯ’ ಎಂದರು. ಆದೇಶ ಇನ್ನೂ ಹೊರಬಿದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.