ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧ: ಕೇಂದ್ರ ಸಚಿವ ಜಾವಡೇಕರ್

ಶೀಘ್ರದಲ್ಲೇ ಸರ್ಕಾರಕ್ಕೆ ಹಸ್ತಾಂತರ

ಪಿಟಿಐ
Published 15 ಡಿಸೆಂಬರ್ 2018, 17:03 IST
Last Updated 15 ಡಿಸೆಂಬರ್ 2018, 17:03 IST
   

ಪಣಜಿ: ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ನೇಮಿಸಿದ್ದ ಸಮಿತಿಯು ತನ್ನ ಕಾರ್ಯವನ್ನು ಪೂರ್ಣಗೊಳಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ತಿಳಿಸಿದ್ದಾರೆ.

ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಕೇಂದ್ರ ಸರ್ಕಾರಕ್ಕೆ ಸದ್ಯದಲ್ಲೇ ವರದಿಯನ್ನು ಹಸ್ತಾಂತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕರಡು ನೀತಿಯು ಗ್ರಾಹ್ಯತೆ, ಲಭ್ಯತೆ, ಗುಣಮಟ್ಟ, ನ್ಯಾಯೋಚಿತ ಹಾಗೂ ಹೊಣೆಗಾರಿಕೆ ಎಂಬ ಐದು ಆಧಾರಸ್ತಂಭಗಳ ಮೇಲೆ ನಿಂತಿದೆ.

ADVERTISEMENT

ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳಲು ಹಾಗೂ ಅಳಡಿಸಿಕೊಳ್ಳಲು ಸಚಿವಾಲಯವು ವೇಳಾಪಟ್ಟಿಯನ್ನು ರಚಿಸಲಿದೆ ಎಂದು ಜಾವಡೇಕರ್ ಹೇಳಿದರು.

ಜನಸಾಮಾನ್ಯರಿಗೂ ಶಿಕ್ಷಣ ತಲುಪಿಸುವ ಉದ್ದೇಶವನ್ನುಹೊಸ ಶಿಕ್ಷಣ ಕರಡು ನೀತಿ ಹೊಂದಿದೆ.ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣವರೆಗೆ ಇದು ವ್ಯಾಪಿಸಿದೆ.

ದೇಶದಲ್ಲಿ ಬಳಕೆಯಾಗುವ ಹಲವು ವಸ್ತುಗಳು ವಿದೇಶದಲ್ಲಿ ತಯಾರಾಗುತ್ತಿದ್ದು, ಸಂಶೋಧನೆ ಹಾಗೂ ಅನ್ವೇಷಣೆಯಲ್ಲಿ ಭಾರತ ಹಿಂದೆ ಬಿದ್ದಿದೆ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು.

1968ರಲ್ಲಿ ಇಂದಿರಾಗಾಂದಿ ಅವರ ಅವಧಿಯಲ್ಲಿ ಮೊದಲ ಶಿಕ್ಷಣ ನೀತಿಯನ್ನು ಘೋಷಿಸಲಾಗಿತ್ತು. 1986ರಲ್ಲಿ ರಾಜೀವ್‌ಗಾಂಧಿ ಅವರ ಅವಧಿಯಲ್ಲಿ ಎರಡನೇ ನೀತಿ ಜಾರಿಗೊಂಡಿತ್ತು.

ವಿ.ವಿಗಳಿಗೆ ರ‍್ಯಾಂಕಿಂಗ್

ಪಣಜಿ: ದೇಶದ ಸಣ್ಣಸಣ್ಣ ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕ ರ‍್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಗೋವಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ದೇಶದ ಎಲ್ಲ ವಿಧದ ವಿಶ್ವವಿದ್ಯಾಲಯಗಳಿಗೆ ಒಂದೇ ಪ್ರಕ್ರಿಯೆ ಆಧರಿಸಿ ರ‍್ಯಾಂಕ್ ನೀಡುವುದು ಸರಿಯಲ್ಲ ಎಂದು ಕುಲಪತಿ ಪ್ರೊ. ವರುಣ್ ಸಾಹ್ನಿ ದನಿ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಾವಡೇಕರ್, ಮುಂದಿನ ವರ್ಷಗಳಲ್ಲಿ ಪ್ರತ್ಯೇಕ ರ್‍ಯಾಂಕಿಂಗ್ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.