ADVERTISEMENT

ಡಿಆರ್‌ಡಿಒ 148 ಯೋಜನೆಗಳಿಗೆ ಅನುಮತಿ ನೀಡಿದೆ: ರಾಜ್ಯಸಭೆಗೆ ಮಾಹಿತಿ

ಪಿಟಿಐ
Published 1 ಡಿಸೆಂಬರ್ 2025, 16:07 IST
Last Updated 1 ಡಿಸೆಂಬರ್ 2025, 16:07 IST
ಡಿಆರ್‌ಡಿಒ
ಡಿಆರ್‌ಡಿಒ   

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ರಕ್ಷಣಾ ಸಂಶೋಧನೆ ಮತ್ತು ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) 148 ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅನುಮತಿ ನೀಡಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.

ರಕ್ಷಣಾ ಇಲಾಖೆ ರಾಜ್ಯ ಸಚಿವ ಸಂಜಯ್‌ ಸೇತ್‌ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಒದಗಿಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಆಗುತ್ತಿರುವ ನಿರ್ಣಾಯಕ ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನು ಸಂಶೋಧಿಸುವಲ್ಲಿ ಡಿಆರ್‌ಡಿಒ ಅಲ್ಲದೇ ಅದರ ವ್ಯಾಪ್ತಿಯಲ್ಲಿ ಬರುವ ಔದ್ಯಮಿಕ ಶಿಕ್ಷಣದ ನಾವೀನ್ಯತೆ ಕೇಂದ್ರ (ಇಂಡಸ್ಟ್ರಿ ಅಕಾಡೆಮಿ–ಸೆಂಟರ್ ಆಫ್‌ ಎಕ್ಸಲೆನ್ಸಿ) ಸಹಕಾರ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಕ್ಷಣಾ ಕ್ಷೇತ್ರದ ಉತ್ಪಾದನೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಲಿಖಿತ ಪ್ರಶ್ನೆ ಕೇಳಲಾಗಿತ್ತು. 

ADVERTISEMENT

ಆಯವ್ಯಯ ಅಂದಾಜು ಅಂಕಿಅಂಶಗಳ ಸಮೇತ ಉತ್ತರ ನೀಡಿದ ಸಚಿವರು, ಇಲಾಖೆಗೆ ಮೀಸಲಿಟ್ಟ ಅನುದಾನ, ಕಳೆದ ಮೂರು ವರ್ಷಗಳಲ್ಲಿ ಮಾಡಿದ ಖರ್ಚುಗಳ ಮಾಹಿತಿ ನೀಡಿದ್ದಾರೆ.

2022–23ಕ್ಕೆ ₹21,330.20 ಕೋಟಿ, 23–24ನೇ ಸಾಲಿಗೆ ₹23,263.89 ಕೋಟಿ, 2024–25ನೇ ಸಾಲಿಗೆ ₹23,855.61 ಕೋಟಿ, 25–26ನೇ ಸಾಲಿಗೆ ₹26,816.82 ಕೋಟಿ ಬಜೆಟ್ ಅನುದಾನ ಅನುಮೋದಿಸಲಾಗಿತ್ತು. ಡಿಆರ್‌ಡಿಒ ಯಾಂತ್ರಿಕ ವ್ಯವಸ್ಥೆಗಳು ಮತ್ತು ಸಲಕರಣೆಗಳನ್ನು ತಯಾರಿಸಲು 2,000 ಕೈಗಾರಿಕೆಗಳ ಸಮೂಹವನ್ನೇ ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದ್ದಾರೆ.

ಭಾರತದ ಕೈಗಾರಿಕೆಗಳಿಗೆ ತಂತ್ರಜ್ಞಾನದ ವರ್ಗಾವಣೆಯ ಶೂನ್ಯ ತೆರಿಗೆ ಮೂಲಕ ತನ್ನ ತಾಂತ್ರಿಕ ಸಹಕಾರ ನೀಡುತ್ತಿದೆ. ಆ ಮೂಲಕ ಕೈಗಾರಿಕೆಗಳನ್ನು ರಕ್ಷಣಾ ಅಭಿವೃದ್ಧಿ ಮತ್ತು ತಯಾರಿಕೆ ಪಾಲುದಾರರನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಡಿಆರ್‌ಡಿಒ ವಿಜ್ಞಾನಿಗಳ ಸಲಹೆಯನ್ನೂ ಒದಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್‌–ಅಪ್‌ಗಳ ಜೊತೆ ಸುಲಭವಾಗಿ ಸಂವಹಿಸಲು ಡಿಆರ್‌ಡಿಒ ನೂತನ ನೀತಿ ರೂಪಿಸಿದೆ. ರಕ್ಷಣಾ ಕ್ಷೇತ್ರದ ಪ್ರಯೋಗಗಳಲ್ಲಿ ಸ್ಟಾರ್ಟ್ ಅಪ್‌ಗಳು ತಮ್ಮ ನವೀನ ಕಲ್ಪನೆಗಳನ್ನು ಹಂಚಿಕೊಳ್ಳಲು ಇದರಲ್ಲಿ ಅವಕಾಶ ಇದೆ ಎಂದಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಆರು ಸೈನಿಕ ಶಾಲೆಗಳ ಜೊತೆ ರಾಜ್ಯ ಸರ್ಕಾರಗಳು ಒಪ್ಪಂದಕ್ಕೆ ಸಹಿ ಹಾಕುವುದು ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.